
ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದ ಜನ ಸಂಚಾರದ ಮೊದಲ ದಿನವೇ ಎಲ್ಲಾ ಮೂರು ರೈಲುಗಳು ಸಂಪೂರ್ಣ ಭರ್ತಿಯಾಗಿ ಸಂಚರಿಸಿದ್ದು, ಹೊಸ ಮಾರ್ಗದಲ್ಲಿ ಪ್ರಯಾಣಿಸಿದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 6.30ಕ್ಕೆ ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣದಿಂದ ರೈಲು ಸಂಚಾರ ಆರಂಭವಾಯಿತು. ಹೊಸಮಾರ್ಗ, ಹೊಸ ಮಾದರಿಯ ರೈಲಿನಲ್ಲಿ ಪ್ರಯಾಣಿಸಲು ಜನರು ಉತ್ಸುಕರಾಗಿದ್ದರು. ರೈಲಿನಲ್ಲಿ ನಿತ್ಯ ಎಲೆಕ್ಟ್ರಾನಿಕ್ ಸಿಟಿಗೆ ತೆರಳುವ ಟೆಕ್ಕಿಗಳು, ಗಾರ್ಮೆಂಟ್ಸ್ ನೌಕರರು, ಕಾರ್ಖಾನೆ ನೌಕರರು ಹೆಚ್ಚಾಗಿ ಕಂಡು ಬಂದರು.
ಮೆಟ್ರೋದ ಈ ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ಇದ್ದು, 19.15 ಕಿಲೋ ಮೀಟರ್ ಉದ್ದವಿದೆ. ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಮೂರು ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ.
ಮೊದಲ ದಿನದಂದು ರೈಲಿನಲ್ಲಿ ಪ್ರಯಾಣಿಸಿದ ಶೇಖರ್ ಎಂಬ ಪ್ರಯಾಣಿಕರೊಬ್ಬರು ಮಾತನಾಡಿ, ಮಗುವಿನೊಂದಿಗೆ ಸಿಲ್ಕ್ ಬೋರ್ಡ್‌ಗೆ ಪ್ರಯಾಣಿಸುತ್ತಿದ್ದೇನೆ. ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
ನಾವು ಸಾಮಾನ್ಯವಾಗಿ ಆಟೋಗಾಗಿ ರೂ.300 ಪಾವತಿಸುತ್ತಿದ್ದೆವು. ಆಟೋಗೆ ಹೋಲಿಸಿದರೆ ಮೆಟ್ರೋ ದರ ಬಹಳ ಕಡಿಮೆ. ರೈಲಿಗಾಗಿ 25 ನಿಮಿಷ ಕಾಯಬೇಕೆಂದರೆ ತೊಂದರೆಯಿಲ್ಲ. ಮೆಟ್ರೋ ಪ್ರಯಾಣ ಸುಲಭ ಹಾಗೂ ಹೆಚ್ಚು ಆರಾಮದಾಯಕವಾಗಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ, ನಾನು ಬೊಮ್ಮಸಂದ್ರದಿಂದ ಚಿಕ್ಕಪೇಟೆ ತಲುಪಲು ಬಸ್ ನಲ್ಲಿ ಪ್ರಯಾಣಿಸಿ, ನಂತರ ಆಟೋದಲ್ಲಿ ಪ್ರಯಾಣಿಸುತ್ತಿದ್ದೆ. ಎರಡು ಗಂಟೆಗೂ ಹೆಚ್ಚು ಸಮಯ ಬೇಕಿತ್ತು. ಈಗ ಮೆಟ್ರೋದೊಂದಿಗೆ ಒಂದು ಗಂಟೆಯೊಳಗೆ ಹೋಗಬಹುದು. ಇಂದು ಒಂದು ರೀತಿ ಗೇಮ್ ಚೇಂಜರ್ ಆಗಿದೆ ಎಂದು ಮತ್ತೊಬ್ಬ ಪ್ರಯಾಣಿಕರಾದ ಬೊಮ್ಮಸಂದ್ರದ ನಿವಾಸಿ ಲಾವಣ್ಯ ಅವರು ಹೇಳಿದ್ದಾರೆ.
ಐಟಿ ಉದ್ಯೋಗಿ ಹರಿಣಿ ಅವರು ಮಾತನಾಡಿ, ಹಳಿದಿ ಮಾರ್ಗದಿಂದಾಗಿ ಬನಶಂಕರಿಯಿಂದ ಜಯದೇವ ಆಸ್ಪತ್ರೆಯ ಬಳಿಯಿರುವ ನನ್ನ ಕಚೇರಿಗೆ ಕೇವಲ 10 ನಿಮಿಷಗಳಲ್ಲಿ ತಲುಪಿದ್ದೇನೆ. ಈ ಹಿಂದೆ ಇದೇ ಪ್ರಯಾಣ 1 ಗಂಟೆಯಾಗುತ್ತಿತ್ತು. ಇದು ಐಟಿ ವೃತ್ತಿಪರರು ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ನಿವಾಸಿಗಳಿಗೆ ಸಹಾಯ ಮಾಡುವ ಒಂದು ಉತ್ತಮ ಉಪಕ್ರಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣವು ಈಗ ನಾಡಪ್ರಭು ಕೆಂಪೇಗೌಡ ನಿಲ್ದಾಣದ ನಂತರ ಎರಡನೇ ಇಂಟರ್‌ಚೇಂಜ್ ಆಗಿದ್ದು, ಹಸಿರು ಮತ್ತು ಹಳದಿ ಮಾರ್ಗಗಳನ್ನು ಸಂಪರ್ಕಿಸುತ್ತದೆ. ಈ ಮಾರ್ಗವು 39 ಮೀಟರ್ ಎತ್ತರದಲ್ಲಿರುವ ಭಾರತದ ಅತಿ ಎತ್ತರದ ಮೆಟ್ರೋ ನಿಲ್ದಾಣವಾಗಿದೆ.
ಈ ನಡುವೆ ಕೆಲ ಪ್ರಯಾಣಿಕರು ಆರ್‌ವಿ ರಸ್ತೆ ನಿಲ್ದಾಣದಲ್ಲಿ ಆಸನ ವ್ಯವಸ್ಥೆಗಳ ಕೊರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇತರ ಮೆಟ್ರೋ ನಿಲ್ದಾಣಗಳಿಗೆ ಹೋಲಿಸಿದರೆ ಪ್ಲಾಟ್‌ಫಾರ್ಮ್ ಸ್ಥಳಾವಕಾಶ ಚಿಕ್ಕದಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರ ಸುರಕ್ಷತೆಗಾಗಿ ಉಕ್ಕಿನ ಬ್ಯಾರಿಕೇಡ್‌ಗಳು ಅಥವಾ ಪ್ಲಾಟ್‌ಫಾರ್ಮ್ ಸ್ಕ್ರೀನ್ ಬಾಗಿಲುಗಳನ್ನು (ಪಿಎಸ್‌ಡಿ) ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ.
ಹಳದಿ ಮಾರ್ಗ ಫೀಡರ್ ಬಸ್ ಗೆ ಚಾಲನೆ
ಬೆಂಗಳೂರು ಮೆಟ್ರೋ ಹಳದಿ ಮಾರ್ಗಕ್ಕೆ ಪೂರಕವಾಗಿ ಬಿಎಂಟಿಸಿ ಹೊಸ ಮೆಟ್ರೋ ಫೀಡರ್‌ಬಸ್ ಸೇವೆ ಆರಂಭಿಸಲಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಂಗಳವಾರ ಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಫೇಸ್ 1, ವಿಪ್ರೋ ಗೇಟ್ ಬಸ್ ನಿಲ್ದಾಣದ ಚಾಲನೆ ನೀಡಲಿದ್ದಾರೆ.
ಎಲೆಕ್ಟ್ರಾನಿಕ್ಸ್ ಸಿಟಿ, ಕೋನಪ್ಪನ ಅಗ್ರಹಾರ, ಹೊಸರೋಡ್, ಕಸವನಹಳ್ಳಿ, ಕೈಕೊಂಡ್ರಹಳ್ಳಿ, ದೊಡ್ಡಕನ್ನಳ್ಳಿ ನಡುವೆ 4 ಬಸ್ಸುಗಳು ದಿನಕ್ಕೆ 32 ಬಾರಿ ಸಂಚರಿಸಲಿವೆ. ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಹುಸ್ಕೂರು ಗೇಟ್, ಚಿಂತಲ ಮಡಿವಾಳ, ಮುತ್ತಾನಲ್ಲೂರು ಕ್ರಾಸ್, ತಿಮ್ಮಸಂದ್ರ ಕ್ರಾಸ್, ಚಂದಾಪುರ ಕ್ರಾಸ್ ನಡುವೆ 4 ಬಸ್ಸುಗಳು ದಿನಕ್ಕೆ 24 ಬಾರಿ ಓಡಾಡಲಿವೆ. ಬೊಮ್ಮಸಂದ್ರ, ತಿರುಪಾಳ್ಯ ಕ್ರಾಸ್, ಎಸ್-ಮಾಂಡೋ-3, ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಗೋಡಿ, ಬೊಮ್ಮಸಂದ್ರ ನಡುವೆ 2 ಬಸ್ಸುಗಳು 20 ಬಾರಿ ಸಂಚರಿಸಲಿವೆ. ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್, ಎಸ್- ಮಾಂಡೋ-3, ತಿರುಪಾಳ್ಯ ಕ್ರಾಸ್, ಬೊಮ್ಮಸಂದ್ರ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೋನಪ್ಪನ ಅಗ್ರ ಹಾರ ನಡುವೆ 2 ಬಸ್ಸುಗಳಿಗೆ 20 ಸುತ್ತುವಳಿ ನಿಗದಿಪಡಿಸಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
ಹೊಸ ರೈಲಿನಲ್ಲಿ ಡಿಜಿಟಲ್ ಬೋರ್ಡ್ ಗಳಿದ್ದು, ಇದರಲ್ಲಿ ಹಳದಿ ಮಾರ್ಗದ ಎಲ್ಲ ನಿಲ್ದಾಣಗಳ ಪಟ್ಟಿಯಿದೆ. ಜೊತೆಗೆ ಪ್ರಯಾಣಿಕ ಸದ್ಯ ಇರುವ ನಿಲ್ದಾಣ, ಮುಂದಿನ ನಿಲ್ದಾಣ ಹಾಗೂ ಹಿಂದಿನ ನಿಲ್ದಾಣಗಳ ಕುರಿತು ಬಿತ್ತರವಾಗುತ್ತದೆ. ಜಾಹೀರಾತು, ಸೂಚನೆ ನೀಡಲು ಪ್ರತ್ಯೇಕ ಡಿಜಿಟಲ್ ಬೋಡ್ ೯ಗಳಿವೆ. ಮೊಬೈಲ್ ಚಾರ್ಜಿಂಗ್‌ಗೆ ಸ್ವಿಚ್ ಬೋರ್ಡ್ ಜತೆಗೆ ಯುಎಸ್‌ಬಿ ಅವಕಾಶವೂ ಇದೆ. ಸುಧಾರಿತ ಸಿಸಿ ಕ್ಯಾಮೆರಾ, ಹ್ಯಾಂಡಲ್ ಇನ್ನಿತರ ಸೌಲಭ್ಯಗಳಿವೆ.
ಇನ್ನು ಸಾರ್ವಜನಿಕ ಆರೋಗ್ಯ ಅಭಿಯಾನವನ್ನು ಪ್ರಾರಂಭಿಸಿರುವ ನಾರಾಯಣ ಹೆಲ್ತ್ ಹಳದಿ ಮಾರ್ಗದ ಉದ್ದಕ್ಕೂ ಭಿತ್ತಿಚಿತ್ರಗಳನ್ನು ಅಂಟಿಸಿದ್ದು, ನೈರ್ಮಲ್ಯ, ಪೋಷಣೆ, ಲಸಿಕೆ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವ ಕಾರ್ಯವನ್ನು ಮಾಡಿದೆ.
Advertisement