
ಬೆಂಗಳೂರು: ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮತ್ತು ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಸೋಮವಾರ ಕರ್ನಾಟಕ ವಿಧಾನಮಂಡಲದ ವ್ಯವಹಾರ ಸಲಹಾ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ 9 ದಿನಗಳ ಅಧಿವೇಶನವನ್ನು ವಿಸ್ತರಣೆ ಮಾಡದಿರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕ ವಿಧಾನಮಂಡಲದ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್, ಅಧಿವೇಶನ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿದ್ದು, ಚರ್ಚೆಯ ಬಳಿಕ ಸಮಿತಿಯು 9 ದಿನಗಳ ಅಧಿವೇಶನವನ್ನು ವಿಸ್ತರಣೆ ಮಾಡದಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೆಚ್ಚುವರಿ ಚರ್ಚೆಗಳು ಅಗತ್ಯವಿದ್ದರೆ, ಮೊದಲೇ ಕಲಾಪಗಳನ್ನು ಪ್ರಾರಂಭಿಸಿ ಸಂಜೆ ತಡವಾಗಿ ಅಂತ್ಯಗೊಳಿಸಬಹುದು ಎಂದು ಸೂಚಿಸಿದರು. ಅದರಂತೆ, ಮಂಗಳವಾರದ ಅಧಿವೇಶನ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ಈ ನಡುವೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರ ಮನವಿಗೆ ಪ್ರತಿಕ್ರಿಯಿಸಿದ ಸಮಿತಿಯು, ಸರ್ಕಾರಿ ಶಾಲೆಗಳ ಸ್ಥಿತಿಗತಿಯ ಕುರಿತು ಚರ್ಚೆ ನಡೆಸಲು ಒಪ್ಪಿಗೆ ನೀಡಿತು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರದ ಪರವಾಗಿ ಚರ್ಚೆಯ ನೇತೃತ್ವ ವಹಿಸಲಿದ್ದು, ವಿರೋಧ ಪಕ್ಷವನ್ನು ಅನುಭವಿ ಶಾಸಕರು ಪ್ರತಿನಿಧಿಸಲಿದ್ದಾರೆ.
ಶಾಸಕಾಂಗದ ಪಾರದರ್ಶಕತೆಯನ್ನು ಸುಧಾರಿಸುವ ಸಲುವಾಗಿ, ಎಲ್ಲಾ ಮಸೂದೆಗಳನ್ನು ಮುಂಚಿತವಾಗಿ ವಿರೋಧ ಪಕ್ಷಗಳೊಂದಿಗೆ ಹಂಚಿಕೊಳ್ಳಬೇಕೆಂದು ಸಮಿತಿ ನಿರ್ಧರಿಸಿದೆ.
24 ಮಸೂದೆಗಳನ್ನು ಈಗಾಗಲೇ ಸಲ್ಲಿಸಲಾಗಿದ್ದು, ಒಟ್ಟು 34 ರಲ್ಲಿ ಉಳಿದ 10 ಮಸೂದೆಗಳನ್ನು ಮಂಗಳವಾರ ಹಸ್ತಾಂತರಿಸಲಾಗುವುದು ಎಂದು ಕಾನೂನು ಸಚಿವರು ಸದನಕ್ಕೆ ತಿಳಿಸಿದರು.
ವಿರೋಧ ಪಕ್ಷಗಳ ಮಸೂದೆಗಳನ್ನು ಪರಿಶೀಲನೆಗೆ ಸ್ವೀಕರಿಸಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಇದೇ ವೇಳೆ ಸಚಿವ ಹೆಚ್,ಕೆ.ಪಾಟೀಲ್ ಅವರು ಹೇಳಿದರು.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮತ್ತು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಹಾಜರಿದ್ದರು.
Advertisement