ಮೆಟ್ರೋ ಕಾಮಗಾರಿ, ರಸ್ತೆ ಅಗಲೀಕರಣ ಎಫೆಕ್ಟ್: 141 Hopcoms ಮಳಿಗೆಗಳು ಬಂದ್..!
ಬೆಂಗಳೂರು: ರಸ್ತೆ ಅಗಲೀಕರಣ ಮತ್ತು ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಯಿಂದಾಗಿ 141 ತೋಟಗಾರಿಕೆ ಉತ್ಪಾದಕರ ಸಹಕಾರಿ ಮಾರುಕಟ್ಟೆ ಮತ್ತು ಸಂಸ್ಕರಣಾ ಸಂಘ (ಹಾಪ್‌ಕಾಮ್ಸ್) ಮಳಿಗೆಗಳು ಮುಚ್ಚಲ್ಪಟ್ಟಿವೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಂಗಳವಾರ ಮಾಹಿತಿ ನೀಡಿದರು.
ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತರ ವೇಳೆದಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಹಾಪ್‍ಕಾಮ್ಸ್ ಮಳಿಗೆಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ರಸ್ತೆ ಅಗಲೀಕರಣ, ಮೆಟ್ರೋ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಂದಾಗಿ ಮಳಿಗೆಗಳು ಬಂದ್ ಆಗಿವೆ. ಬೀದಿ ಬದಿ ವ್ಯಾಪಾರಿಗಳ ತೀವ್ರ ಪೈಪೋಟಿಗಳಿಂದ ಹಾಪ್ ಕಾಮ್ಸ್ ಗಳಲ್ಲಿ ವ್ಯಾಪಾರ ಕುಸಿತವಾಗಿದೆ. ಹೀಗಾಗಿ 557 ಮಳಿಗೆಗಳ ಪೈಕಿ 416 ಮಳಿಗೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಹಾಪ್‍ಕಾಮ್ಸ್ ಗಳಲ್ಲಿ ಮಂಜೂರಾದ 782 ಹುದ್ದೆಗಳ ಪೈಕಿ 438 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 384 ಹುದ್ದೆಗಳು ಖಾಲಿಯಿವೆ. ಇದರ ನಿರ್ವಹಣೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.
ಹಾಪ್ ಕಾಮ್ಸ್ ಸಂಸ್ಥೆಗೆ ವಾರ್ಷಿಕ ಶೇ.10.25ರ ಬಡ್ಡಿ ದರದಲ್ಲಿ 15 ಕೋಟಿ ರೂ. ಸಾಲ ನೀಡಲಾಗಿದೆ. ಹಾಪ್ ಕಾಮ್ಸ್ ಗಳಲ್ಲಿ ಮಾರಾಟ ಹೆಚ್ಚಿಸಲು ಹಣ್ಣು-ತರಕಾರಿ ಜೊತೆಗೆ ಇನ್ನಿತರ ಅಗತ್ಯ ವಸ್ತುಗಳ ಮಾರಾಟಕ್ಕೆ ಬೈಲಾದಲ್ಲಿ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.
ದೈನಂದಿನ ವಹಿವಾಟು ಹೆಚ್ಚಿಸಲು ಹೋಟೆಲ್, ಕಾರ್ಖಾನೆಗಳು, ಸಂಘ-ಸಂಸ್ಥೆಗಳಿಗೆ ಸಗಟು ದರದಲ್ಲಿ ಹಣ್ಣು-ತರಕಾರಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮೊಬೈಲ್ ವಾಹನಗಳ ಮೂಲಕ ಅಪಾರ್ಟ್‍ಮೆಂಟ್‍ಗಳಿಗೆ ತೆರಳಿ ವ್ಯಾಪಾರ ಹೆಚ್ಚಿಸಲು ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದರು.
ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್‌ಗೆ 9,500 ರೂ. ಪರಿಹಾರ
ಇದೇ ವೇಳೆ ಬಾಗಲಕೋಟೆ, ವಿಜಯಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ದಾಳಿಂಬೆ, ದ್ರಾಕ್ಷಿ ಮತ್ತು ಕಲ್ಲಂಗಡಿ ಮುಂತಾದ ಬೆಳೆಗಳು ಹಾನಿಗೊಳಗಾಗಿವೆ ಎಂದು ಕೆಲವು ಸದಸ್ಯರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ದುಂಡಾಣು ರೋಗ, ಕೊಳೆ ರೋಗ, ಸೊರಗು ರೋಗ ಹಾಗೂ ಕಾಂಡ ಕೊರಕ ಕೀಟಗಳಿಂದ ಅಂದಾಜು 1,350 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಗೆ ಹಾನಿಯಾಗಿದೆ. ದಾಳಿಂಬೆ ಬೆಳೆಗಾರರ ಹಿತದೃಷ್ಟಿಯಿಂದ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸಮಗ್ರ ತೋಟಗಾರಿಕೆ ಅಭಿವೃದ್ದಿ ಮಿಷನ್ ಯೋಜನೆಯಡಿ ಸಮಗ್ರ ಕೀಟ-ರೋಗ ನಿರ್ವಹಣೆ , ಸಮಗ್ರ ಪೋಷಕಾಂಶ ನಿರ್ವಹಣೆಯಡಿ ಜೈವಿಕ ಕೀಟನಾಶಕ , ಸಾವಯವ ಗೊಬ್ಬರ, ಲಘು ಫೋಷಕಾಂಶ ಗಳಿಗೆ ರೈತರಿಗೆ ಸಹಾಯ ಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಮಗ್ರ ತೋಟಗಾರಿಕೆ ಅಭಿವೃದ್ದಿ ಮಿಷನ್ ಯೋಜನೆಯಡಿ ಪಕ್ಷಿಗಳಿಂದ ಹಾನಿ ಉಂಟಾಗುವುದನ್ನು ತಪ್ಪಿಸಲು ನಿರೋಧಕ ಬಲೆ ಬಳಸಲು ಸಹಾಯ ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ದಾಳಿಂಬೆ ತೋಟಗಳಲ್ಲಿ ಸಮರ್ಪಕ ನೀರಿನ ನಿರ್ವಹಣೆ ಮಾಡಲು ಎಲ್ಲ ವರ್ಗದ ರೈತರಿಗೆ 2 ಹೆಕ್ಟೇರ್ ವರೆಗೆ ಶೇ.90ರಷ್ಟು ಮತ್ತು 2.1-05 ಹೆಕ್ಟೇರ್ ವರೆಗೆ ಶೇ.45ರಷ್ಟು ಸಹಾಯ ಧನ ನೀಡಲಾಗುತ್ತಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ