
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿತ್ತು, ಈ ಬಗ್ಗೆ ವಿಧಾನಪರಿಷತ್ ನಲ್ಲಿ ಮಂಗಳವಾರ ತೀವ್ರ ಚರ್ಚೆ ನಡೆಯಿತು.
ಪ್ರಶ್ತೋತರ ಕಲಾಪ ವೇಳೆ ವಿಪಕ್ಷ ಸದಸ್ಯ ಎಸ್. ಎಲ್. ಭೋಜೇಗೌಡ ಅವರು ಚಿಕ್ಕಮಗಳೂರು ನಗರ ಮತ್ತು ಜಿಲ್ಲೆಯ ಇತರ ಸ್ಥಳಗಳ ಜನರು ಬೀದಿ ನಾಯಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಧ್ವನಿ ಎತ್ತಿದರು.
ಮಕ್ಕಳು, ಹಿರಿಯ ನಾಗರಿಕರ ಮೇಲೆ ನಾಯಿ ಕಚ್ಚುವ ಪ್ರಕರಣಗಳು ಅಧಿಕವಾಗುತ್ತಿವೆ. ಚಿಕ್ಕಮಗಳೂರಿಗೆ ಸೀಮಿತವಾಗಿರದೇ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಈ ಸಮಸ್ಯೆ ಉಲ್ಬಣಗೊಂಡಿದೆ. ಸಚಿವರು, ಶಾಸಕರು, ನ್ಯಾಯಾಧೀಶರ ಮಕ್ಕಳಿಗೆ ಬೀದಿನಾಯಿಗಳಿಂದ ಸಮಸ್ಯೆಯಿಲ್ಲ. ಬೀದಿಯಲ್ಲಿ ಓಡಾಡುವ ಮಕ್ಕಳಿಗೆ ಮಾತ್ರ ತೊಂದರೆಯಾಗುತ್ತಿವೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಬೀದಿ ನಾಯಿಗಳ ದಾಳಿಯಿಂದ ರೇಬಿಸ್ ಖಾಯಿಲೆ ಬರುತ್ತಿದ್ದು, ಇದನ್ನ ತಪ್ಪಿಸಲು ಲಸಿಕೆಯಿದೆ. ನಾಯಿ ಕಚ್ಚೋದನ್ನು ತಪ್ಪಿಸುವುದು ಹೇಗೆ? ಎಂಬುದರ ವಸ್ತು ಸ್ಥಿತಿ ಬಗ್ಗೆ ಸುಪ್ರೀಂ ಕೋರ್ಟ್ಗೆ ಕೇಳುವುದರಲ್ಲಿ ತಪ್ಪೇನಿಲ್ಲ. ಈ ಪ್ರಾಣಿ ದಯಾ ಸಂಘದವರದ್ದು ಕಾಟವಾಗಿದೆ. ಅವರ ಮನೆಗಳಿಗೆ ನಾಯಿಗಳನ್ನು ಬಿಡುವಂತೆ ಕಿಚಾಯಿಸಿದರು.
ನಾನು ಈ ಹಿಂದೆ ಸಿಎಂಸಿ ಅಧ್ಯಕ್ಷನಾಗಿದ್ದಾಗ 2 ಸಾವಿರಕ್ಕೂ ನಾಯಿಗಳನ್ನು ಸಾಯಿಸಿ ತೆಂಗಿನ ಮರಗಳಿಗೆ ಗೊಬ್ಬರ ಮಾಡಿಸಿದ್ದೆ. ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಅವುಗಳಿಗಾಗಿ ಚಿರತೆಗಳು ಈಗ ನಗರ ಪ್ರದೇಶಗಳಲ್ಲಿ ಆಗಾಗ್ಗೆ ಬರುತ್ತಿವೆ. ಜನರು ಬೀದಿ ನಾಯಿಗಳಿಂದ ಮಾತ್ರವಲ್ಲದೆ ಚಿರತೆಗಳಿಂದಲೂ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿಯೂ ಈ ಕಾಟ ವ್ಯಾಪಕವಾಗಿದೆ.
ಬೀದಿ ನಾಯಿಗಳ ದಾಳಿ ಸಮಸ್ಯೆ ಗಂಭೀರವಾಗಿದ್ದು, ಸರ್ಕಾರವು ಈ ಬಗ್ಗೆ ಕಾನೂನು ಸಲಹೆ ಪಡೆದು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುವಂತೆ ಸಲಹೆ ನೀಡಿದರು. ಇದೇ ವೇಳೆ ಇತರ ಸದಸ್ಯರು ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಕಳುಹಿಸಬೇಕು ಮತ್ತು ಪ್ರಾಣಿ ಪ್ರಿಯರು ಅವುಗಳನ್ನು ದತ್ತು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಪುರಸಭೆ ಆಡಳಿತ ಸಚಿವ ರಹೀಮ್ ಖಾನ್ ಅವರು, ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮದಡಿ ಲಸಿಕೆ ಶಿಬಿರಗಳನ್ನು ಪೀಡಿತ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಶೀಘ್ರದಲ್ಲೇ ಚಿಕ್ಕಮಗಳೂರಿನಲ್ಲಿ ಇಂತಹ ಶಿಬಿರಗಳನ್ನು ನಡೆಸಲಾಗುವುದು ಮತ್ತು ನಗರದಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Advertisement