Online ಗೇಮಿಂಗ್ ಹಾವಳಿ ತಡೆಗೆ ಸೆಪ್ಟೆಂಬರಲ್ಲಿ ಮಾರ್ಗಸೂಚಿ ಪ್ರಕಟ: ರಾಜ್ಯ ಸರ್ಕಾರ

ಆನ್‌ಲೈನ್‌ ಗೇಮ್‌ ಮಕ್ಕಳಿಗೆ ಪಿಡುಗು ಆಗಿದೆ. ಡ್ರಗ್ಸ್ ಮುಕ್ತ ರಾಜ್ಯ ಮಾಡುವ ರೀತಿಯಲ್ಲಿ ಆನ್‌ಲೈನ್‌ ಗೇಮ್‌ ಮುಕ್ತ ಮಾಡಬೇಕು. ಇಲ್ಲದಿದ್ದರೆ ಈ ಆನ್‌ಲೈನ್‌ ಗೇಮ್‌ಗಳು ಯುವ ಸಮುದಾಯವನ್ನು ಮುಗಿಸುತ್ತದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್‌ ಗೇಮಿಂಗ್ ಹಾವಳಿ ತಡೆಗೆ ಡಿಜಿಪಿ ಪ್ರಣಬ್ ಮೋಹಂತಿ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಸೆಪ್ಟೆಂಬರ್‌ನಲ್ಲಿ ವರದಿ ನೀಡಲಿದೆ. ವರದಿಯ ಆಧಾರದಲ್ಲಿ ನಿಯಮ ರೂಪಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಗಳವಾರ ಹೇಳಿದರು.

ಪ್ರಶೋತ್ತರ ಕಲಾಪ ವೇಳೆ ಆನ್‌ಲೈನ್‌ ಗೇಮಿಂಗ್ ಹಾವಳಿ ವಿಚಾರ ಪ್ರಸ್ತಾಪಿಸಿದ ಶಾಸಕ ಸುರೇಶ್‌ ಕುಮಾರ್‌ ಅವರು, ಆನ್‌ಲೈನ್‌ ಗೇಮ್‌ ಮಕ್ಕಳಿಗೆ ಪಿಡುಗು ಆಗಿದೆ. ಡ್ರಗ್ಸ್ ಮುಕ್ತ ರಾಜ್ಯ ಮಾಡುವ ರೀತಿಯಲ್ಲಿ ಆನ್‌ಲೈನ್‌ ಗೇಮ್‌ ಮುಕ್ತ ಮಾಡಬೇಕು. ಇಲ್ಲದಿದ್ದರೆ ಈ ಆನ್‌ಲೈನ್‌ ಗೇಮ್‌ಗಳು ಯುವ ಸಮುದಾಯವನ್ನು ಮುಗಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾಜದ ಸ್ವಾಸ್ಥ್ಯ ಕಾಪಾಡಲು ಯುವ ಸಮುದಾಯದ ರಕ್ಷಣೆಗೆ ಆನ್‌ಲೈನ್‌ ಗೇಮ್‌ ನಿರ್ಬಂಧ ಅಗತ್ಯವಿದ್ದು, ಸುಪ್ರೀಂಕೋರ್ಟ್​ನಲ್ಲಿ ಇರುವ ಈ ಸಂಬಂಧದ ಪ್ರಕರಣವನ್ನು ಶೀಘ್ರ ವಿಲೇವಾರಿ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು, ಮಕ್ಕಳನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.

ಅಲ್ಲದೇ, ನನ್ನ ಮೊಬೈಲ್‌ಗೆ ರಮ್ಮಿ ಆಡಿ ಬಹುಮಾನ ಗೆಲ್ಲಿರಿ ಎಂದು ಸಂದೇಶ ಬಂದಿದೆ. 8 ಸಾವಿರ ಬೋನಸ್‌‍ ಇದೆ, 1,62,000 ನಿಮ್ಮ ವ್ಯಾಲೆಟ್‌ನಲ್ಲಿ ಎಂದು ಸಂದೇಶ ಬಂದಿದೆ. ಇದರಿಂದ ಬಹಳಷ್ಟು ಜನ ಪ್ರಚೋದಿತರಾಗಿ ಆಡುತ್ತಾರೆ. ಅಲ್ಲದೇ ಪ್ರಖ್ಯಾತ ಕ್ರೀಡಾಪಟುಗಳು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಸಚಿವ ಪರಮೇಶ್ವರ್ ಅವರು. ಯುವಕರ ಭವಿಷ್ಯ ಹಾಳು ಮಾಡುವ ವಿಚಾರದಲ್ಲಿ ಆನ್‌ಲೈನ್‌ ಗೇಮ್‌ಗಳು ಮಾದಕ ವ್ಯಸನಕ್ಕಿಂತ ಹೆಚ್ಚು ಹಾನಿ ಮಾಡುತ್ತಿವೆ. ಇದರ ನಿಯಂತ್ರಣಕ್ಕಾಗಿ 2021ರಲ್ಲಿ ಪೊಲೀಸ್‌‍ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ತಿದ್ದುಪಡಿ ಕಾಯ್ದೆಗೆ ಅಖಿಲ ಭಾರತ ಗೇಮಿಂಗ್‌ ಒಕ್ಕೂಟ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದೆ. 2022ರಲ್ಲಿ ಈ ತಿದ್ದುಪಡಿ ಕಾಯ್ದೆ ರದ್ದಾಗಿದೆ. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ ಎಂದು ಹೇಳಿದರು.

File photo
ಪರಿಶಿಷ್ಟ ಜಾತಿ ಒಳ ಮೀಸಲಾತಿ: ಪರಮೇಶ್ವರ್ ನೇತೃತ್ವದ ಸಭೆ, ಸಮೀಕ್ಷಾ ವರದಿ ಸ್ವಾಗತಿಸಲು ನಿರ್ಧಾರ

ಕಂಪ್ಯೂಟರ್‌, ಮೊಬೈಲ್‌ ಆ್ಯಪ್‌, ಎಲೆಕ್ಟ್ರಾನಿಕ್ಸ್​​ ಉಪಕರಣಗಳನ್ನು ಬಳಸಿ ಆನ್‌ಲೈನ್‌ ಗೇಮ್‌ ಆಡುವುದನ್ನು ಕಾಯ್ದೆ ವ್ಯಾಪ್ತಿಗೆ ತರಲಾಗಿದೆ. ಕಳೆದ ಏಪ್ರಿಲ್ 8 ರಂದು ಆನ್‌ಲೈನ್‌ ಗೇಮ್‌ ನಡೆಸುವವರ ಸಭೆ ನಡೆಸಿ ನಿಯಂತ್ರಣ ಮಾಡುವ ಬಗ್ಗೆ ಚರ್ಚಿಸಲಾಗಿತ್ತು. ಅವರು ಒಪ್ಪಿದ್ದಾರೆ.

ಈಗಾಗಲೇ ಐಪಿಎಸ್ ಅಧಿಕಾರಿ ಪ್ರಣಮ್‌ ಮೊಹಾಂತಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಸೆಪ್ಟೆಂಬರ್‌ನಲ್ಲಿ ಸಮಿತಿ ವರದಿ ಬರಲಿದೆ. ಆನ್​​​ಲೈನ್‌ ಗೇಮ್‌ ನಿಯಂತ್ರಿಸಲು ಸಮಿತಿ ಮಾಡುವ ಶಿಫಾರಸು ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಆನ್‌ ಲೈನ್‌ ಗೇಮ್‌ ನಿಯಂತ್ರಿಸಲು ಬದ್ದವಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಆನ್​ಲೈನ್‌ ಗೇಮ್​ಗಳಿಗೆ ಸಂಬಂಧಿಸಿದ ಪ್ರಕರಣಗಳ ಕುರಿತು ಮಾಹಿತಿ ನೀಡಿದ ಅವರು, ಕಳೆದ ಮೂರು ವರ್ಷಗಳಲ್ಲಿ 347 ಪ್ರಕರಣಗಳು ದಾಖಲಾಗಿವೆ. 2025ರ ಜುಲೈ ಅಂತ್ಯಕ್ಕೆ 159 ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.

ಬಳಿಕ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಫ್ಯಾಂಟಸಿ ಕ್ರೀಡೆಯನ್ನು ಕೌಶಲ್ಯವೆಂದು ಪರಿಗಣಿಸಲಾಗಿದೆ. ಆನ್‌ಲೈನ್‌ ಗೇಮಿಂಗ್‌ 4.5 ಬಿಲಿಯನ್‌ ಡಾಲರ್‌ ವ್ಯವಹಾರವಾಗಿದೆ. ಶೇ.28 ರಷ್ಟು ಜಿಎಸ್‌‍ಟಿ ಇದೆ. ಆದರೆ, ಚೈನಾ ಹಾಗೂ ವಿದೇಶಗಳ ಸರ್ವರ್‌ ಆಧರಿಸಿ ಆಟ ಆಡಿಸುತ್ತಿದ್ದಾರೆ. ಜಿಎಸ್‌‍ಟಿ ಇಲ್ಲ, ಕೆವೈಸಿಯೂ ಇಲ್ಲ ಎಂಬ ಜಾಹೀರಾತು ನೀಡುತ್ತಾರೆ. ಮೋಸವಾದರೂ ಏನೂ ಮಾಡಲಾಗುವುದಿಲ್ಲ. ಇದಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಸೂಕ್ತ ನಿಯಂತ್ರಣ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com