
ಬೆಂಗಳೂರು: ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗದ ಸಂಚಾರ ಆರಂಭವಾಗಿದ್ದು, ಇದರ ಬೆನ್ನಲ್ಲೇ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದಾಗಿ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ.
ಆರ್.ವಿ. ರೋಡ್-ಬೊಮ್ಮಸಂದ್ರ ಹಳದಿ ಮೆಟ್ರೋ ಮಾರ್ಗದಲ್ಲಿ ಅಧಿಕಾರಿಗಳು ದೊಡ್ಡ ಯಡವಟ್ಟು ಮಾಡಿದ್ದು ಪ್ರಯಾಣಿಕರು ತುಂಬಾ ಗೊಂದಲಕ್ಕೊಳಗಾಗುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್ ಇರುವ ಜಾಗದಲ್ಲಿ ಇನ್ಫೋಸಿಸ್ ಫೌಂಡೇಶನ್- ಕೋನಪ್ಪನ ಅಗ್ರಹಾರ ಎಂದು ಹೆಸರಿಡಲಾಗಿದೆ. ಕೋನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್ ಎಂದು ಇರಬೇಕಾದ ಜಾಗದಲ್ಲಿ ಎಲೆಕ್ಟ್ರಾನಿಕ್ ಸಿಟಿ ಎಂದು ಹೆಸರಿಡಲಾಗಿದೆ. ಇದು ಪ್ರಯಾಣಿಕರಿಗೆ ಸಮಸ್ಯೆಗಳನ್ನು ಎದುರು ಮಾಡುತ್ತಿದ್ದು, ಹೆಸರು ಅದಲು-ಬದಲು ಆಗಿರುವುದಿರಂದ ಅಲ್ಲಿ ಇಳಿಯಬೇಕಾದವರು ಅಲ್ಲಿ, ಅಲ್ಲಿ ಇಳಿಯಬೇಕಾದವರು ಇಲ್ಲಿ ಇಳಿದು ಸಮಸ್ಯೆ ಎದುರಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.
BMRCL ಅಧಿಕಾರಿಗಳ ಎಡವಟ್ಟಿನ ಬಗ್ಗೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕೊನಪ್ಪನ ಅಗ್ರಹಾರ ಮತ್ತು ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣಗಳಲ್ಲಿ ಬಹಳ ವ್ಯತ್ಯಾಸ ಕಂಡುಬಂದಿದ್ದು, ಮೆಟ್ರೋದಲ್ಲಿ ಪ್ರಯಾಣಿಸುವ ಜನರಲ್ಲಿ ಈ ವ್ಯತ್ಯಾಸದಿಂದಾಗಿ ಕೆಲ ಗೊಂದಲ ಉಂಟಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಹಾಗೂ ಕೊನಪ್ಪನ ಅಗ್ರಹಾರ ನಿಲ್ದಾಣಗಳಿಗೆ ಟಿಕೆಟ್ ಖರೀದಿಸುವ ವೇಳೆ ತುಂಬಾ ಗೊಂದಲ ಮತ್ತು ಸಮಸ್ಯೆ ಸೃಷ್ಟಿಯಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಗೆ ಹೋಗಬೇಕಾದ ಪ್ರಯಾಣಿಕರು ಕೊನಪ್ಪನ ಅಗ್ರಹಾರಕ್ಕೆ ಟಿಕೆಟ್ ಪಡೆಯಬೇಕಾದ್ರೆ, ಕೊನಪ್ಪನ ಅಗ್ರಹಾರಕ್ಕೆ ಹೋಗುವ ಪ್ರಯಾಣಿಕರು ಎಲೆಕ್ಟ್ರಾನಿಕ್ ಸಿಟಿಗೆ ಟಿಕೆಟ್ ಪಡೆಯಬೇಕಾಗಿದೆ. ಈ ಗೊಂದಲದಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ.
ಈ ಎರಡು ಮೆಟ್ರೊ ನಿಲ್ದಾಣಗಳಲ್ಲಿರುವ ಹೆಸರು ಮತ್ತು ಅಲ್ಲೇ ಪಕ್ಕದಲ್ಲಿರುವ ಬಿಎಂಟಿಸಿ ನಿಲ್ದಾಣಗಳಲ್ಲಿ ಇರುವ ಹೆಸರು ಪ್ರಯಾಣಿಕರನ್ನು ಮತ್ತಷ್ಟು ತಬ್ಬಿಬ್ಬುಗೊಳಿಸುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಹಳದಿ ಮಾರ್ಗ ಸಂಚಾರ ಆರಂಭದ ಮೂಲಕ ಪ್ರಯಾಣದ ಸಮಯ 30 ನಿಮಿಷಕ್ಕೆ ಇಳಿದಿದೆ. ಆದರೆ, ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ ನಿಲ್ದಾಣ ಎಂಬ ಎರಡು ನಿಲ್ದಾಣಗಳ ಹೆಸರುಗಳಲ್ಲಿ ಬಹಳಷ್ಟು ಗೊಂದಲಗಳಿವೆ, ಅದನ್ನು ಬದಲಾಯಿಸಬೇಕು ಎಂದು ಪ್ರಯಾಣಿಕ ಶಿಲ್ಪಾ ರಾವ್ ಎಂಬುವವರು ಹೇಳಿದ್ದಾರೆ.
ಮತ್ತೊಬ್ಬ ಪ್ರಯಾಣಿಕ ಶೈಲೇಶ್ ಎಸ್ ಪೂಜಾರಿ ಎಂಬುವವರು ಮಾತನಾಡಿ, ಈ ವ್ಯತ್ಯಾಸವು ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡುವುದಲ್ಲದೆ, ಸ್ಥಳದ ಪ್ರಸಿದ್ಧತೆಗೂ ಹಾನಿಯುಂಟು ಮಾಡುತ್ತದೆ. ಕೋನಪ್ಪನ ಅಗ್ರಹಾರವನ್ನು ಮೆಟ್ರೋದಲ್ಲಿ ಎಲೆಕ್ಟ್ರಾನಿಕ್ ಸಿಟಿ ಎಂದು ಹೆಸರಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿಯನ್ನು ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ ಎಂದು ಹೆಸರಿಸಲಾಗಿದೆ. ಇದು ಗೊಂದಲ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ.
ಹಳದಿ ಮಾರ್ಗ ಗೇಮ್-ಚೇಂಜರ್ ಆಗಿದೆ. ಆದರೆ, ನಿಲ್ದಾಣ ಹೆಸರು ಗೊಂದಲ ಸೃಷ್ಟಿಸುತ್ತಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಹಳದಿ ಮಾರ್ಗದ ಮೆಟ್ರೋವನ್ನು ಬಳಕೆ ಮಾಡುವುದರಿಂದ ಗೊಂದಲ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಏತನ್ಮಧ್ಯೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಹೊಸದಾಗಿ ಪ್ರಾರಂಭಿಸಲಾದ ಹಳದಿ ಮಾರ್ಗದ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸಲು ಫೀಡರ್ ಬಸ್ ಸೇವೆಗಳನ್ನು ಮಂಗಳವಾರ ಪ್ರಾರಂಭಿಸಿದೆ.
ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಸೇವೆಯನ್ನು ಉದ್ಘಾಟಿಸಿದರು. ಈ ಸೇವೆಗಳು ಹೊಸೂರು ರಸ್ತೆ, ಬೆರೆಟೆನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ ಎಂಬ ಆರು ನಿಲ್ದಾಣಗಳನ್ನು ಒಳಗೊಂಡಂತೆ 12 ಬಸ್‌ಗಳೊಂದಿಗೆ ಪ್ರತಿದಿನ 96 ಟ್ರಿಪ್‌ಗಳನ್ನು ನಡೆಸಲಿದೆ. ಈ ಉಪಕ್ರಮವು ಟೆಕ್ ಕಾರಿಡಾರ್‌ನಲ್ಲಿ ಪ್ರಯಾಣಿಕರ ಪ್ರಯಾಣವನ್ನು ಸುಗಮಗೊಳಿಸುತ್ತದೆ ಎಂದು ಬಿಎಂಟಿಸಿ ಹೇಳಿದೆ.
Advertisement