
ಬೆಂಗಳೂರು: ‘ಮುನ್ನಾ ಭಾಯಿ ಎಂಬಿಬಿಎಸ್’ ಚಿತ್ರದಲ್ಲಿ ನಡೆದಂತೆ ಬಿಹಾರದ 24 ವರ್ಷದ ಯುವಕನೊಬ್ಬ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ - ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ (ICFRE-IWST)ಯ ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗೆ ನಡೆದ ಪರೀಕ್ಷೆಯನ್ನು ತನ್ನ ಸ್ನೇಹಿತನಿಂದ ಬರೆಸಿ, ಕರ್ತವ್ಯಕ್ಕೆ ಹಾಜರಾಗುವಾಗ ಸಿಕ್ಕಿಬಿದ್ದಿದ್ದಾನೆ.
ಬಿಹಾರದ ನಳಂದ ಜಿಲ್ಲೆಯ ನಿವಾಸಿ ಅಂಜ್ ರಾಜ್ ಪಿಯು ಪರೀಕ್ಷೆ ಮುಗಿಸಿ ಎಂಟಿಎಸ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದನು. ಸಂಸ್ಥೆ ಆತನಿಗೆ ಪ್ರವೇಶ ಪತ್ರ ನೀಡಿತ್ತು. ಆದರೆ, ಆತ ಮಾರ್ಚ್ 16 ರಂದು ಎಂಎಸ್ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪರೀಕ್ಷೆ ಬರೆಯಲು ತಮ್ಮ ಸ್ನೇಹಿತನನ್ನು ಕಳುಹಿಸಿದ್ದನು. ಬಳಿಕ ಎಂಟಿಎಸ್ ಹುದ್ದೆಗೆ ಆತ ಆಯ್ಕೆಯಾಗಿದ್ದನು.
ಅದರಂತೆ ಜುಲೈ 14 ರಂದು ರಾಜ್ ಕರ್ತವ್ಯಕ್ಕೆ ಬಂದಾಗ ವಂಚನೆ ಬೆಳಕಿಗೆ ಬಂದಿದೆ. ರಾಜ್ ಅವರ ಸಹಿ, ಬೆರಳಚ್ಚು ಮತ್ತು ಛಾಯಾಚಿತ್ರ ಪರೀಕ್ಷೆಗೆ ಹಾಜರಾದ ವ್ಯಕ್ತಿಗೆ ಹೊಂದಿಕೆಯಾಗುತ್ತಿಲ್ಲ ಎಂಬುದನ್ನು ಸಿಬ್ಬಂದಿ ಗಮನಿಸಿದ್ದಾರೆ. ನಂತರ, ಮುಖದ ಲಕ್ಷಣಗಳು ಮತ್ತು ಚರ್ಮದ ಗುರುತುಗಳು ಸಹ ಭಿನ್ನವಾಗಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಐಡಬ್ಲ್ಯುಎಸ್‌ಟಿ ನಿರ್ದೇಶಕರ ಉಸ್ತುವಾರಿ ವಹಿಸಿಕೊಂಡಿರುವ ಐಎಫ್‌ಎಸ್ ಅಧಿಕಾರಿ ರಾಜೇಶ್ ಎಸ್ ಅವರು ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದಾರೆ ಮತ್ತು ಬಿಎನ್‌ಎಸ್‌ನ ವಿವಿಧ ವಿಭಾಗಗಳು ಮತ್ತು ಸಾರ್ವಜನಿಕ ಪರೀಕ್ಷೆ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ಪರೀಕ್ಷೆ ಬರೆದಿದ್ದ ಸ್ನೇಹಿತ ಸದ್ಯ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಬಿಹಾರಕ್ಕೆ ತಂಡವನ್ನು ಕಳುಹಿಸಲಾಗಿದೆ. ಆದರೆ, ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ರಾಜ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement