ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಗೌಡ ಮತ್ತು ದರ್ಶನ್ ಸೇರಿದಂತೆ 7 ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಸಮಾಜದಲ್ಲಿ ವ್ಯಕ್ತಿ ಎಷ್ಟೇ ಬಲಿಷ್ಠನಾಗಿರಲಿ, ಶ್ರೀಮಂತನಾಗಿರಲಿ ಕಾನೂನಿನ ಮುಂದೆ ಎಲ್ಲರೂ ಸಮ ಎಂಬುದು ನ್ಯಾಯಮೂರ್ತಿಗಳ ತೀರ್ಪಿನಲ್ಲಿ ವ್ಯಕ್ತವಾಗಿದೆ. ದರ್ಶನ್ ಕೇಸಿನಲ್ಲಿ ಜಾಮೀನು ನೀಡಿದ್ದಕ್ಕಾಗಿ ಹೈಕೋರ್ಟ್ ನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಂಗವಾಗಿ ಇಲ್ಲಿ ತನ್ನ ಬುದ್ಧಿಯನ್ನು ಉಪಯೋಗಿಸಿದೆಯೇ ಎಂದು ಪ್ರಶ್ನಿಸಿತು. ಇನ್ನು ಜಾಮೀನು ರದ್ದಾಗುತ್ತಿದ್ದಂತೆ ಪವಿತ್ರಾಗೌಡ ಮತ್ತು ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಆರೋಗ್ಯ ತಪಾಸಣೆಯನ್ನು ನಡೆಸಿದ ಬಳಿಕ ಪೊಲೀಸರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಎ1 ಆರೋಪಿಯಾಗಿರುವ ಪವಿತ್ರಾಗೌಡಳನ್ನು ಆಕೆಯ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದರೆ ದರ್ಶನ್ ನನ್ನು ಹೊಸಕೆರೆಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ನಿವಾಸದಲ್ಲಿ ವಶಕ್ಕೆ ಪಡೆದು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಕರೆತರಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದಕ್ಕೆ ರೇಣುಕಾಸ್ವಾಮಿ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಮಗನ ಸಾವಿಗೆ ನ್ಯಾಯ ಸಿಗುವ ವಿಶ್ವಾಸ ಹೆಚ್ಚಾಗಿದೆ ಎಂದು ರೇಣುಕಾಸ್ವಾಮಿ ತಾಯಿ ರತ್ನ ಪ್ರಭಾ ಹೇಳಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇಬೇಕು. ಕಾನೂನು ಅನ್ವಯ ತಕ್ಕ ಶಿಕ್ಷೆ ಆಗಲಿ ಎಂದು ರೇಣುಕಾಸ್ವಾಮಿ ಪತ್ನಿ ಸಹನಾ ಹೇಳಿದ್ದಾರೆ. ಮತ್ತೊಂದೆಡೆ ನಟಿ ರಮ್ಯಾ ಈ ಪ್ರಕರಣದ ವಿಚಾರವಾಗಿ ದರ್ಶನ್ ಅವರನ್ನು ವಿರೋಧಿಸುತ್ತಲೇ ಬಂದಿದ್ದರು. ಈಗ ಜಾಮೀನು ರದ್ದಾಗುತ್ತಿದ್ದಂತೆ ಪೋಸ್ಟ್ ಮಾಡಿರುವ ಅವರು, ಕಾನೂನಿನ ಮುಂದೆ ಎಲ್ಲರೂ ಒಂದೇ. ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಇರಿ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.
ಕೋಮು ಭಾವನೆಗಳಿಗೆ ನೋವುಂಟು ಮಾಡುವ ಮತ್ತು ಪ್ರಚೋದಿಸುವ ದ್ವೇಷ ಭಾಷಣ ಮಾಡುವವರ ವಿರುದ್ಧ ಹೊಸ ಕಾನೂನು ತರಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ. ಕರಾವಳಿ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೋಮು ಸಾಮರಸ್ಯ ಹಾಳಾಗಿದೆ. ಇದರಿಂದಾಗಿ ಕೊಲೆಗಳು ಮತ್ತು ಹಿಂಸಾಚಾರಗಳು ನಡೆಯುತ್ತಿವೆ. ಇದನ್ನು ತಡೆಯಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಅನಗತ್ಯವಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಭಾಷಣ ಮತ್ತು ಪ್ರಚೋದನಕಾರಿ ಪೋಸ್ಟ್‌ಗಳು ಹಿಂಸಾಚಾರಕ್ಕೆ ಕಾರಣವಾಗಿವೆ. ಆದ್ದರಿಂದ, ಮುಂದಿನ ದಿನಗಳಲ್ಲಿ ದ್ವೇಷ ಭಾಷಣ ಮಾಡುವವರ ವಿರುದ್ಧ ಹೊಸ ಕಾನೂನನ್ನು ಜಾರಿಗೆ ತರಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಮೆಟ್ರೋ ಯೋಜನೆಗಳ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾಗ ಸುರಂಗ ರಸ್ತೆ ಯೋಜನೆಯ ಬಗ್ಗೆ ಪ್ರಾತ್ಯಕ್ಷಿಕೆ ಸಲ್ಲಿಸುವಂತೆ ಹೇಳಿದರು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ವಿಧಾನ ಪರಿಷತ್ ಗೆ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಬೆಂಗಳೂರಿನ ಮಹತ್ವಾಕಾಂಕ್ಷಿ ಸುರಂಗ ರಸ್ತೆ ಯೋಜನೆ ತೀವ್ರ ಚರ್ಚೆಗೆ ಗ್ರಾಸವಾಯಿತು. ಇದು ಹಣ ಹೊಡೆಯುವ ಯೋಜನೆಯಲ್ಲ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ 'ಸಾಕ್ಷಿ ಗುಡ್ಡೆ' ಬಿಟ್ಟು ಹೋಗುವ ನನ್ನ ಕನಸು ಎಂದು ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದರು. ಪ್ರಧಾನಿ ಮೋದಿ ಮತ್ತು ನಿತಿನ್ ಗಡ್ಕರಿಯವರೇ ನನಗೆ ಬೆಂಬಲ ಸೂಚಿಸಿದ್ದಾರೆ ಎಂದ ಡಿಕೆ ಶಿವಕುಮಾರ್ ಅವರು ಹೇಳಿದರು. ಈ ವೇಳೆ ಸಿ.ಟಿ. ರವಿ ಅವರು 'ಲಾಭವಿಲ್ಲದೆ ಡಿಕೆಶಿ ಏನೂ ಮಾಡಲ್ಲ' ಎಂದರು. 'ಲಾಭ ನೋಡೋನು ನೀನು, ನಾನು ಪಕ್ಷದ ಹೆಸರು ನೋಡುವವನು' ಎಂದು ಖಾರವಾಗಿಯೇ ತಿರುಗೇಟು ನೀಡಿದರು.
ಬುಧವಾರ ದಿನವಿಡೀ ಸುರಿದ ಮಳೆಯಿಂದಾಗಿ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇಂದು ಕೂಡ ಮೋಡ ಕವಿದ ವಾತಾವರಣವಿದೆ. ಇನ್ನು ವಾರಾಂತ್ಯದವರೆಗೂ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನಿನ್ನೆ ಸುರಿದ ಮಳೆಗೆ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದವು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಮಳೆ ಹಾಗೂ ನೀರು ತುಂಬಿದ್ದ ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮುಂದಿನ 36 ಗಂಟೆಗಳ ಕಾಲ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಇದು ವಾರಾಂತ್ಯದವರೆಗೆ ಮುಂದುವರೆಯಲಿದೆ ಎಂದು ಭಾರತ ಹವಾಮಾನ ಇಲಾಖೆ ಹೇಳಿದ್ದು ಎಲ್ಲೋ ಅಲರ್ಟ್ ಘೋಷಿಸಿದೆ.
Advertisement