
ಬೆಂಗಳೂರು: 79ನೇ ಸ್ವಾತಂತ್ರ್ಯ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಾಡಿನ ಸಮಸ್ತೆ ಜನತೆಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಇಂದು ಭಾರತವು ಬ್ರಿಟಿಷರ ವಸಾಹತುಶಾಹಿ ಆಡಳಿತದಿಂದ ಮುಕ್ತಗೊಂಡ ಶುಭದಿನ. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಮೌಲಾನಾ ಅಬುಲ್ ಕಲಾಂ ಅಜಾದ್ ಮುಂತಾದ ಕೆಚ್ಚೆದೆಯ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದಲ್ಲಿ ದೇಶಾದ್ಯಂತ ಲಕ್ಷಾಂತರ ಹೋರಾಟಗಾರರು ತಮ್ಮ ತ್ಯಾಗ, ಬಲಿದಾನದ ಮೂಲಕ 1947ರ ಆಗಸ್ಟ್ 15ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರು. ದೇಶದ ನಾಳೆಗಳನ್ನು ರೂಪಿಸುವ ಸಲುವಾಗಿ ತಮ್ಮ ಇಂದಿನ ಬದುಕನ್ನೇ ತ್ಯಾಗ ಮಾಡಿದ ಆ ಎಲ್ಲ ಮಹನೀಯರನ್ನು ನಾವು ಇಂದು ಮನದುಂಬಿ ಸ್ಮರಿಸೋಣ ಎಂದು ಹೇಳಿದ್ದಾರೆ.
ಭಾರತದ ಸ್ವಾತಂತ್ರ್ಯವು ಅಖಂಡವಾಗಿಯೂ, ಸಮಗ್ರವಾಗಿಯೂ ಸದಾಕಾಲ ನಳನಳಿಸಬೇಕೆಂದರೆ ನಮ್ಮ ಸಂವಿಧಾನದ ಮೂಲ ತತ್ವಗಳಾದ ಸಾರ್ವಭೌಮತೆ, ಪ್ರಜಾಸತ್ತಾತ್ಮತೆ, ಸಮಾಜವಾದ, ಜಾತ್ಯತೀತತೆ, ಸ್ವತಂತ್ರ ನ್ಯಾಯಾಂಗ, ರಾಜ್ಯ ನಿರ್ದೇಶಕ ತತ್ವಗಳು, ಒಕ್ಕೂಟ ತತ್ವಗಳು ಇದಾವುದೂ ಒಂದಿನಿತೂ ಮುಕ್ಕಾಗದಂತೆ ಎಚ್ಚರವಹಿಸಬೇಕು. ಭಾರತದ ಅಖಂಡತೆಯ ರಕ್ಷಣೆಯೆನ್ನುವುದು ಕೇವಲ ದೇಶದ ಗಡಿಗಳ ರಕ್ಷಣೆಗೆ ಮಾತ್ರವೇ ಸೀಮಿತವಲ್ಲ. ಬದಲಿಗೆ ದೇಶದೊಳಗಿರುವ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯ ಪಾವಿತ್ರ್ಯವನ್ನು ಕಾಪಾಡುವುದಕ್ಕೂ ಅನ್ವಯಿಸುತ್ತದೆ.
ಸ್ವತಂತ್ರ ನ್ಯಾಯಾಂಗ, ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳು, ನಿರ್ಭೀತ ತನಿಖಾ ಸಂಸ್ಥೆಗಳು ಇವೆಲ್ಲವೂ ಸ್ವತಂತ್ರ ಭಾರತದ ಹೆಗ್ಗುರುತುಗಳಾಗಿವೆ. ಇವುಗಳ ಪಾವಿತ್ರ್ಯಕ್ಕೆ ಧಕ್ಕೆ ಒದಗಿದರೆ ದೇಶದ ಸ್ವಾತಂತ್ರ್ಯಕ್ಕೇ ಧಕ್ಕೆ ಒದಗಿದಂತೆ. ಹಾಗಾಗಿ, ಯಾವುದೇ ಬೆಲೆ ತೆತ್ತಾದರೂ ಸರಿಯೇ ಇವುಗಳನ್ನು ಮೂಲಸ್ವರೂಪದಲ್ಲಿಯೇ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಇಂದು ಹೆಚ್ಚು ವಿಸ್ತಾರವಾಗಿ ವ್ಯಾಖ್ಯಾನಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಬೇಕಿದೆ. ಮತ್ತೊಮ್ಮೆ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ತಿಳಿಸಿದ್ದಾರೆ.
Advertisement