
ಬೆಳಗಾವಿ: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸುಕುಧಾರಿ ಸಾಕ್ಷಿದಾರನ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಶಾಸಕರೊಬ್ಬರು 'ಮೊದಲು ಆತನ ಮಂಪರು ಪರೀಕ್ಷೆ ಮಾಡಿ' ಎಂದು ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಪ್ರದೇಶಗಳಲ್ಲಿ ನಡೆದಿರುವ ಶೋಧ ಕಾರ್ಯಾಚರಣೆಯಲ್ಲಿ ಮುಸುಕುದಾರಿ ದೂರುದಾರ ಹೇಳಿಕೊಂಡಂತೆ ದೊಡ್ಡ ಪ್ರಮಾಣದಲ್ಲಿ ಅಸ್ತಿಪಂಜರಗಳು ದೊರೆತಿಲ್ಲ. ಇದು ಆತನ ಆರೋಪಗಳ ಮೇಲೆಯೇ ಶಂಕೆ ಮೂಡುವಂತೆ ಮಾಡಿದ್ದು, ಇದೇ ವಿಚಾರವಾಗಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಕಿಡಿಕಾರಿದ್ದಾರೆ.
ಧರ್ಮಸ್ಥಳ ಬುರುಡೆ ಕೇಸ್‌ನ ಮುಸುಕುಧಾರಿಯ ಮಂಪರು ಪರೀಕ್ಷೆಯನ್ನು ಮಾಡಬೇಕು ಎಂದು ಕೈ ಶಾಸಕ ಲಕ್ಷ್ಮಣ ಸವದಿ (Laxman Savadi) ಒತ್ತಾಯಿಸಿದ್ದು, ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, 'ಸುಳ್ಳು ಆರೋಪ ಮಾಡುವವರಿಗೆ ಇದು ಎಚ್ಚರಿಕೆ ಗಂಟೆ ಆಗಬೇಕು ಎಂದರು.
ಅಂತೆಯೇ ಮುಸುಕುಧಾರಿಯನ್ನಿಟ್ಟುಕೊಂಡು ಒಳಸಂಚು ಮಾಡ್ತಿದ್ದಾರಾ ನೋಡಬೇಕು. ಯಾರಿಗೂ ಕಳಂಕ ತರುವ ಕೆಲಸ ಯಾರೂ ಮಾಡಿದರೂ ಒಳಸಂಚು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಂತೆಯೇ ಮುಸುಕುಧಾರಿ ಹಿನ್ನೆಲೆ ಏನು ಎನ್ನುವುದು ಪತ್ತೆಯಾಗಬೇಕು. ಇಲ್ಲಿಯವರೆಗೂ ಸರ್ಕಾರದ ಹಣ ಎಷ್ಟು ವೆಚ್ಚವಾಗಿದೆಯೋ ಅದನ್ನು ವಸೂಲಿ ಮಾಡಬೇಕು. ಮಂಪರು ಪರೀಕ್ಷೆಯಲ್ಲಿ ಅತನ ಒಪ್ಪಿಗೆ ಬೇಕಾಗುತ್ತದೆ. ಬೇರೆ ದಾರಿಯಲ್ಲಿ ತನಿಖೆ ಮಾಡಿ ಸಂಚು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದು ಸರ್ಕಾರ ಅಥವಾ ಪಕ್ಷದ ನಿಲುವಲ್ಲ ಇದು ನನ್ನ ವೈಯಕ್ತಿಕ ಹೇಳಿಕೆ ಎಂದು ಸವದಿ ಹೇಳಿದ್ದಾರೆ.
Advertisement