
ಬೆಂಗಳೂರು: ಕೆರೆಗಳಲ್ಲಿ ತೇಲುವ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸಲು ರಾಜ್ಯಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಯಲಹಂಕದ 2 ಕೆರೆಗಳನ್ನು ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ.
ಯಲಹಂಕದ ದೊಡ್ಡಬೊಮ್ಮಸಂದ್ರ ಮತ್ತು ರಾಚೇನಹಳ್ಳಿಯ ಎರಡು ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಈ ಕೆರೆಗಳಲ್ಲಿ ಶೇಕಡಾ 10 ರಷ್ಟು ತೇಲುವ ಫೋಟೊವೋಲ್ಟಾಯಿಕ್ (FPV) ಫಲಕಗಳ ಅಳವಡಿಸಿ, 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಈ ಯೋಜನೆಗೆ ಕರ್ನಾಟಕ ಟ್ಯಾಂಕ್ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (KTCDA) ದಿಂದ ಅನುಮೋದನೆ ದೊರೆತಿದ್ದು, ಫಲಕಗಳನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (KREDL) ಸ್ಥಾಪಿಸಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ವಿಧಾನಮಂಡಲ ಮುಂಗಾರು ಅಧಿವೇಶನದ ವೇಳೆ ತೇಲುವ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಲು ಆಯ್ಕೆ ಮಾಡಲಾಗಿರುವ ಕರೆಗೆಳ ಕುರಿತು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು ಪ್ರಶ್ನೆಗಳನ್ನು ಎತ್ತಿದ್ದರು.
ಇದಕ್ಕೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅವರು, ಯಲಹಂಕ ವಲಯದಲ್ಲಿರುವ ದೊಡ್ಡಬೊಮ್ಮಸಂದ್ರ ಮತ್ತು ರಾಚೇನಹಳ್ಳಿಯ ಕೆರೆಗಳನ್ನು ವಿದ್ಯುತ್ ಉತ್ಪಾದಿಸಲು ಸೌರ ಫಲಕಗಳನ್ನು ಸ್ಥಾಪಿಸಲು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಕೆರೆ ಪ್ರದೇಶದ ಶೇಕಡಾ 10 ರಷ್ಟು ಪ್ರದೇಶದಲ್ಲಿ ಫಲಕಗಳನ್ನು ಸ್ಥಾಪಿಸುವ ಮೂಲಕ ಸುಮಾರು 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು ಎಂದು ತಿಳಿಸಿದರು.
ತೇಲುವ ಸೌರ ಫಲಕಗಳಿಂದ ಉತ್ಪಾದಿಸುವ ವಿದ್ಯುತ್ ಅನ್ನು ಸರೋವರದ ನಿರ್ವಹಣೆಗೆ ಮತ್ತು ಸುತ್ತಮುತ್ತಲಿನ ದೀಪ ಕಂಬಗಳಿಗೆ ವಿದ್ಯುತ್ ನೀಡಲು ಬಳಸಬಹುದು. ವಿದ್ಯುತ್ ಉತ್ಪಾದನೆಯ ಹೊರತಾಗಿ, ಈ ಫಲಕಗಳು ಸರೋವರದ ನೀರಿನ ಆವಿಯಾಗುವಿಕೆಯನ್ನು ತಡೆಯುತ್ತದೆ ಎಂದು ಹೇಳಿದರು.
ಈ ಯೋಜನೆಗೆ ಬಜೆಟ್ ಹಂಚಿಕೆ ಕುರಿತು ಪ್ರಶ್ನಿಸಿದಾಗ, ಯೋಜನೆಯು ಆರಂಭಿಕ ಹಂತದಲ್ಲಿದೆ. ರಾಜ್ಯ ಸರ್ಕಾರ ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದಕ್ಕಾಗಿ ಯಾವುದೇ ಹಣವನ್ನು ಕಾಯ್ದಿರಿಸಿಲ್ಲ ಎಂದು ಹೇಳಿದರು.
ಈ ಯೋಜನೆಯ ಫಲಿತಾಂಶದ ಆಧಾರದ ಮೇಲೆ ರಾಜ್ಯದಾದ್ಯಂತ ಇತರೆ ಕೆರೆಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.
Advertisement