
ನವದೆಹಲಿ: ಐಫೋನ್ ಸೇರಿ ವಿಶ್ವದ ಖ್ಯಾತ ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನಾ ಕಂಪನಿಯಾದ ಅಮೆರಿಕ ಮೂಲದ ಆ್ಯಪಲ್ ಬೆಂಗಳೂರಿನಲ್ಲಿ ಕಚೇರಿ ತೆರೆಯಲು 2.7 ಲಕ್ಷ ಚದರಡಿ ಜಾಗವನ್ನು ಭೋಗ್ಯಕ್ಕೆ (ಲೀಸ್‌ಗೆ) ಪಡೆದಿದ್ದು, 10 ವರ್ಷಕ್ಕೆ 1,010 ಕೋಟಿ ರುಪಾಯಿ ಬಾಡಿಗೆ ಕೊಡಲಿದೆ ಎಂದು ತಿಳಿದುಬಂದಿದೆ.
ದತ್ತಾಂಶ ವಿಶ್ಲೇಷಕ ಪ್ರೋಪ್‌ಸ್ಟ್ರಾಕ್ ಪರಾಮರ್ಶಿಸಿರುವ ದಾಖಲೆಗಳ ಪ್ರಕಾರ, ಆ್ಯಪಲ್ ಕಂಪನಿಯು ಎಂಬೆಸಿ ಗ್ರೂಪ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ವಸಂತನಗರದಲ್ಲಿರುವ ಎಂಬೆಸಿ ಜೆನಿತ್ ಕಟ್ಟಡದಲ್ಲಿ 5 ರಿಂದ 13ನೇ ಅಂತಸ್ತಿನವರೆಗೂ ಕಚೇರಿಯನ್ನು ಗುತ್ತಿಗೆಗೆ ಪಡೆದಿದೆ.
ಅದಕ್ಕಾಗಿ 31.57 ಕೋಟಿ ರೂ,ಗಳನ್ನು ಮುಂಗಡ ಹಣವಾಗಿ ಪಾವತಿಸಿದ್ದು, ಬಾಡಿಗೆ ವೆಚ್ಚವು ಪ್ರತಿ ವರ್ಷ ಶೇ.4.5ರಷ್ಟು ಹೆಚ್ಚಳವಾಗಲಿದೆ. ಆರಂಭದಲ್ಲಿ ತಿಂಗಳಿನ ಬಾಡಿಗೆ 6.31 ಕೋಟಿ ರು. ಇರಲಿದೆ. ಹೀಗಾಗಿ, ಪಾರ್ಕಿಂಗ್ ಶುಲ್ಕ, ನಿರ್ವಹಣೆ ವೆಚ್ಚವಾಗಿ ಆ್ಯಪಲ್ 10 ವರ್ಷಕ್ಕೆ 1,010 ಕೋಟಿ ರುೂ. ಗೂ ಅಧಿಕ ಬಾಡಿಗೆ ಕಟ್ಟಲಿದೆ ಎಂದು ಅದು ಹೇಳಿದೆ.
ಹೊಸ ಕಚೇರಿಯು 1,200 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಬಹುದು ಎಂದು ಕೈಗಾರಿಕಾ ವಿಶ್ಲೇಷಕರು ಅಂದಾಜಿಸಿದ್ದಾರೆ.
ಭಾರತದಲ್ಲಿ ಹೂಡಿಕೆ ಮಾಡುತ್ತಿರುವ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಸಮಾಧಾನದ ನಡುವೆಯೂ ಆ್ಯಪಲ್ ಬೆಂಗಳೂರಿನಲ್ಲಿ ಜಾಗ ಪಡೆದಿದೆ.
ಜಾಗತಿಕವಾಗಿ ಆ್ಯಪಲ್‌ಗೆ ಬೆಂಗಳೂರು ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಇಲ್ಲಿನ ಕಚೇರಿಗಳು ಎಂಜಿನಿಯರಿಂಗ್, ಹಾರ್ಡ್‌ವೇರ್ ವಿನ್ಯಾಸ, ಸಂಶೋಧನೆ ಮತ್ತು ಪರೀಕ್ಷೆಯಂತಹ ಪ್ರಮುಖ ವಿಭಾಗಗಳನ್ನು ನಿರ್ವಹಿಸುತ್ತಿವೆ.
ಪ್ರಸ್ತುತ ಕಂಪನಿಯು ಮೆಷಿನ್ ಲರ್ನಿಂಗ್ ಎಂಜಿನಿಯರ್, ಸಾಫ್ಟ್‌ವೇರ್ ಡೆವಲಪ್ಮೆಂಟ್ ಎಂಜಿನಿಯರ್ ಸೇರಿದಂತೆ ಹಲವು ತಾಂತ್ರಿಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದೆ.
Advertisement