
ಬೆಂಗಳೂರು: ದೇಶದ ಅನೇಕ ನಗರಗಳಲ್ಲಿಇನ್ನೂ ಆಟೋ ಓಡಿಸುವುದರಲ್ಲಿ ಪುರುಷರದ್ದೇ ಪ್ರಾಬಲ್ಯವಿದೆ. ಆದರೆ, ಕ್ರಮೇಣವಾಗಿ ಮಹಿಳೆಯರು ಕೂಡಾ ಆಟೋ ಓಡಿಸಲು ಮುಂದೆ ಬರ್ತಿದ್ದಾರೆ. ಬೆಂಗಳೂರಿನಲ್ಲಿ ಮಳೆ, ಗಾಳಿ, ಚಳಿಯ ನಡುವೆಯೂ ಆಟೋ ಓಡಿಸುವ ಯುವತಿಯೊಬ್ಬಳು ತನ್ನ ಧೈರ್ಯ, ಬದ್ಧತೆ ಹಾಗೂ ಚಾಲನಾ ಪ್ರೀತಿಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್ ಆಗಿದ್ದಾರೆ.
ಕಾರು ಖರೀದಿಸುವಷ್ಟು ದುಡ್ಡಿಲ್ಲದೆ, ಆಟೋ ಖರೀದಿಸಿದ್ದು, ಇದೀಗ ಆಟೋ ಓಡಿಸುವುದರಲ್ಲಿಯೇ ಖುಷಿಯಾಗಿದ್ದೀನಿ ಎಂದು ಹೇಳುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಆಕೆಯ ದೃಢ ನಿರ್ಧಾರ ಹಾಗೂ ಸಕಾರಾತ್ಮಕ ಚಿಂತನೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚಿಗೆ ಆಟೋವೊಂದನ್ನು ಬುಕ್ ಮಾಡಿದ್ದ ಬೆಂಗಳೂರಿನ ನಿವಾಸಿ ತಮನ್ನಾ ತನ್ವೀರ್ ಅವರಿಗೆ ಮಹಿಳಾ ಆಟೋ ಡ್ರೈವರ್ ನೋಡಿ ಅಚ್ಚರಿಗೊಂಡಿದ್ದು, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿದ್ಯಾವಂತೆ ಹಾಗೂ ಇಂಗ್ಲೀಷ್ ನಲ್ಲಿ ಸ್ಪಷ್ಟತೆ ಇದ್ದರೂ ಯಾಕೆ ಆಟೋ ಡ್ರೈವರ್ ಆಗಿ ಕೆಲಸ ಮಾಡ್ತಿದ್ದಾರೆ ಎಂಬುದನ್ನು ಚಾಲಕಿ ಸಫುರಾ ವಿವರಿಸಿದ್ದಾರೆ.
ಡ್ರೈವಿಂಗ್ ಇಷ್ಟಪಡುತ್ತೇನೆ. ಆಟೋ, ಕಾರು,ಬೈಕ್ ಸೇರಿದಂತೆ ಎಲ್ಲಾ ರೀತಿಯ ವಾಹನಗಳನ್ನು ಓಡಿಸುತ್ತೇನೆ. ಕಾರು ಖರೀದಿಸುವಷ್ಟು ದುಡ್ಡಿಲ್ಲ. ಹಾಗಾಗಿ ಆಟೋ ಓಡಿಸುತ್ತಿದ್ದು, ಅದರಲ್ಲಿ ಖುಷಿಯಿದೆ. ಈ ಕೆಲಸದಲ್ಲಿ ಯಾವುದೇ ಒತ್ತಡ ಇಲ್ಲ. ಅದೇ ಉತ್ಸಾಹ ಹಾಗೂ ಸಂತೋಷದಿಂದ ಪ್ರತಿದಿನ ಕೆಲಸ ಮಾಡುತ್ತೇನೆ. ಮೊದಲಿಗೆ ಭಯ ಪಡುತ್ತಿದ್ದ ನನ್ನ ತಾಯಿ, ಈಗ ನೆಮ್ಮದಿಯಿಂದ ಇದ್ದಾರೆ ಎಂದು ಹೇಳುತ್ತಾರೆ.
ನಿಮ್ಮ ಧೈರ್ಯ ನನ್ನಗೂ ಪ್ರೇರಣೆಯಾಗಿದೆ ಎಂದು ತಮನ್ನಾ ಪ್ರತಿಕ್ರಿಯಿಸುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ಯುವತಿ ಧೈರ್ಯವನ್ನು ಕೊಂಡಾಡುತ್ತಿದ್ದಾರೆ.
Advertisement