
ಚಿತ್ರದುರ್ಗ: ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಚಿತ್ರದುರ್ಗದ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿ ವರ್ಷಿತಾ ಎಂಬಾಕೆಯನ್ನು ಕೊಂದು ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ವಿದ್ಯಾರ್ಥಿನಿಯನ್ನು ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ 19 ವರ್ಷದ ವರ್ಷಿತಾ ಎಂದು ಗುರುತಿಸಲಾಗಿದೆ. ಮೊದಲಿಗೆ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಆಕೆಯ ದೇಹವನ್ನು ಸುಡಲಾಗಿದೆ ಎಂದು ಶಂಕಿಸಲಾಗಿತ್ತು. ಆದರೆ ಇದೀಗ ಸತ್ಯಾಂಶ ಹೊರಬಂದಿದೆ.
ಮೃತ ವರ್ಷಿತಾ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಾಸವಾಗಿದ್ದು ಊರಿಗೆ ಹೋಗುವುದಾಗಿ ಹಾಸ್ಟೆಲ್ ವಾರ್ಡನ್ ಗೆ ರಜೆ ಪತ್ರ ನೀಡಿ ಆಗಸ್ಟ್ 14ರಂದು ಹೊರಬಂದಿದ್ದಳು. ಆದರೆ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಆಕೆಯನ್ನು ಕೊಲೆ ಮಾಡಲಾಗಿದೆ. ಕೊಲೆ ಪ್ರಕರಣ ಸಂಬಂಧ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದು ವರ್ಷಿತಾ ಪ್ರಿಯಕರ ಚೇತನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಿಗೆ ಬಂದಿದೆ.
ವಿಚಾರಣೆ ವೇಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಚೇತನ್ ತಾನು ವರ್ಷಿತಾಳನ್ನು ಪ್ರೀತಿಸುತ್ತಿದ್ದೆ. ಆದರೆ ಆಕೆ ಬೇರೊಬ್ಬನ ಜೊತೆ ಸಂಬಂಧ ಹೊಂದಿದ್ದಳು. ಇದರಿಂದ ಕೋಪಗೊಂಡ ತಾನು ಆಕೆಯನ್ನು ಕೊಲೆ ಮಾಡಿರುವುದಾಗಿ ಚೇತನ್ ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ರಾತ್ರಿ ನಾನು ವರ್ಷಿತಾಳ ಜೊತೆ ಮಾತನಾಡುತ್ತಿದ್ದೆ. ಈ ವೇಳೆ ತಾನು ಗರ್ಭೀಣಿ ಆಗಿದ್ದು ಮದುವೆಯಾಗುವಂತೆ ಒತ್ತಾಯಿಸಿದಳು. ಆದರೆ ಆಕೆಗೆ ಬೇರೊಬ್ಬನ ಜೊತೆ ಸಂಬಂಧವಿತ್ತು. ಇದೇ ವಿಚಾರವಾಗಿ ವಾಗ್ವಾದವಾಗಿ ಆಕೆಗೆ ಹಲ್ಲೆ ಮಾಡಿದೆ. ಆಕೆ ಸ್ಥಳದಲ್ಲೇ ಮೃತಪಟ್ಟಳು. ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆ ಎಂದು ಹೇಳಿದ್ದಾನೆ.
Advertisement