ಜನಸಂದಣಿ ನಿಯಂತ್ರಣ ಮಸೂದೆ ವಿಧಾನಸಭೆಯಲ್ಲಿ ಮಂಡನೆ: ಅನುಮತಿ ರಹಿತ ಕಾರ್ಯಕ್ರಮ ಆಯೋಜಿಸಿದರೆ 1 ಕೋಟಿ ರೂ ದಂಡ..!

ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯುವ ಸಂದರ್ಭದಲ್ಲಿ, ಆಯೋಜಕರು ಒಂದು ಕೋಟಿ ರೂಪಾಯಿ ಮೌಲ್ಯದ ನಷ್ಟಭರ್ತಿ ಬಾಂಡ್-ಅನ್ನು (indemnity bond) ಬರೆದುಕೊಡಬೇಕು.‌
Bengaluru Stampade case
ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣPTI
Updated on

ಬೆಂಗಳೂರು: ಆರ್​ಸಿಬಿ ವಿಯೋತ್ಸವ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿದ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಈ ನಿಟ್ಟಿನಲ್ಲಿ ಕಠಿಣ ಜೈಲು ಶಿಕ್ಷೆ, ದಂಡನೆ ವಿಧಿಸುವ ಜನಸಂದಣಿ ನಿಯಂತ್ರಣ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿದೆ.

ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮತ್ತು ಸಾಮೂಹಿಕ ಸಭೆಯನ್ನು ನಿರ್ವಹಿಸಲು, ಕಾನೂನುಬಾಹಿರ ಸಭೆಗಳನ್ನು ತಡೆಯಲು ಮತ್ತು ಅಪರಾಧಗಳಿಗೆ ಶಿಕ್ಷೆಗೆ ನಿಬಂಧನೆಗಳನ್ನು ಒದಗಿಸಲು ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಸಭೆಯ ಸ್ಥಳದಲ್ಲಿ ಜನಸಂದಣಿಯನ್ನು ನಿರ್ವಹಿಸುವುದು) ಮಸೂದೆ, 2025 ಅನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯುವ ಸಂದರ್ಭದಲ್ಲಿ, ಆಯೋಜಕರು ಒಂದು ಕೋಟಿ ರೂಪಾಯಿ ಮೌಲ್ಯದ ನಷ್ಟಭರ್ತಿ ಬಾಂಡ್-ಅನ್ನು (indemnity bond) ಬರೆದುಕೊಡಬೇಕು.‌ ಕಾರ್ಯಕ್ರಮ ಅಥವಾ ಸಮಾರಂಭದ ದಿನಾಂಕದಂದು, ಜನಸಂದಣಿ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಬಂದೋಬಸ್ತ್ ಯೋಜನೆಯ ಅನುಸರಣೆಯನ್ನು ಪ್ರಾಧಿಕಾರಿ ಮತ್ತು ಆಯೋಜಕರು ಖಚಿತಪಡಿಸಿಕೊಳ್ಳಬೇಕು.

ಯಾವುದೇ ನಾಗರಿಕ ತೊಂದರೆ ಅಥವಾ ಜನಸಂದಣಿ ವಿಪತ್ತಿನಲ್ಲಿ ಸಾರ್ವಜನಿಕ ಅಥವಾ ಖಾಸಗಿ ಸ್ವತ್ತು ಅಥವಾ ಸ್ವತ್ತುಗಳು ಹಾನಿಗೊಳಗಾದರೆ ಅಥವಾ ನಷ್ಟಕ್ಕೊಳಗಾದರೆ ಅಥವಾ ಯಾವುದೇ ಮಾನವ ಪ್ರಾಣಹಾನಿಯಾದರೆ, ಆಯೋಜಕರು ನಷ್ಟವನ್ನು ಸರಿದೂಗಿಸಲು ಪ್ರತ್ಯೇಕವಾಗಿ ಮತ್ತು ಜಂಟಿಯಾಗಿ ಹೊಣೆಗಾರರಾಗಿರಲಿದ್ದಾರೆ. ನ್ಯಾಯಾಲಯದ ಆದೇಶದ ಅನುಸಾರ ಸಂತ್ರಸ್ತರಿಗೆ ಪರಿಹಾರೋತ್ಪತ್ತಿಗಳನ್ನು ವಿತರಿಸಲು, ಆಯೋಜಕರ ಸ್ವತ್ತು ಅಥವಾ ಸ್ವತ್ತುಗಳು ಜಪ್ತಿ ಮಾಡಿಕೊಳ್ಳಲು ಮತ್ತು ಅದನ್ನು ನಗದೀಕರಿಸಬಹುದಾಗಿದೆ.

Bengaluru Stampade case
ಬೆಂಗಳೂರು ಕಾಲ್ತುಳಿತ ಪ್ರಕರಣ: ನ್ಯಾ. ಕುನ್ಹಾ ವರದಿ ಬಹಿರಂಗಪಡಿಸಲ್ಲ; ಹೈಕೋರ್ಟ್'ಗೆ ರಾಜ್ಯ ಸರ್ಕಾರ

ಯಾವುದೇ ಅನುಮತಿ ಪಡೆಯದೆ ಕಾರ್ಯಕ್ರಮ ಅಥವಾ ಸಮಾರಂಭವನ್ನು ಯಾರಾದರೂ ಆಯೋಜಿಸಿದಲ್ಲಿ ಅಥವಾ ಆಯೋಜಿಸಲು ಪ್ರಯತ್ನಿಸಿದಲ್ಲಿ ಅಥವಾ ದುಷ್ಪ್ರೇರಣೆ ಮಾಡಿದಲ್ಲಿ, ಕನಿಷ್ಠ 3 ವರ್ಷಗಳು ಮತ್ತು 7 ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಅಥವಾ 1 ಕೋಟಿ ರೂಪಾಯಿಗಳವರೆಗಿನ ದಂಡ ಅಥವಾ ಅವೆರಡರಿಂದಲೂ ಶಿಕ್ಷೆಗೆ ಒಳಗಾಗಲಿದ್ದಾನೆ.

ಸುಳ್ಳು ವದಂತಿಗಳು, ಹೇಳಿಕೆಗಳು, ಕೃತ್ಯಗಳನ್ನು ಸೃಷ್ಟಿಸುವ ಮೂಲಕ ಅಥವಾ ಸಾಮೂಹಿಕ ಹಿಂಸಾಚಾರದ ಬೆದರಿಕೆ, ಸ್ವತ್ತಿನ ನಾಶ ಅಥವಾ ಇತರ ಕಾನೂನುಬಾಹಿರ ಕೃತ್ಯಗಳನ್ನು ಒಳಗೊಂಡಂತೆ ಯಾವುದೇ ಶಾಂತಿ ಭಂಗವನ್ನು ಉಂಟುಮಾಡುವ ಮೂಲಕ ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ಜನಸಂದಣಿಗೆ ತೊಂದರೆಯುಂಟು ಮಾಡುವ ಅಥವಾ ತೊಂದರೆಯುಂಟು ಮಾಡಲು ಪ್ರಯತ್ನಿಸುವ ವ್ಯಕ್ತಿಗೆ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಅಥವಾ 50 ಸಾವಿರ ರೂಪಾಯಿಗಳ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗಲಿದ್ದಾನೆ.

ಜನಸಂದಣಿ ವಿಪತ್ತಿಗೆ ಕಾರಣರಾಗುವ ಅಥವಾ ಕಾರಣರಾದ ಯಾರಾದರೂ, ಅಂಥ ಜನಸಂದಣಿ ವಿಪತ್ತಿನ ನಿಕಟ ಪೂರ್ವದಲ್ಲಿ, ಅಂಥ ವ್ಯಕ್ತಿ ಅಥವಾ ವ್ಯಕ್ತಿಗಳ ಕೃತ್ಯ, ನಿರ್ಲಕ್ಷ್ಯ ಅಥವಾ ಅಜಾಗರೂಕತೆಯು ಸ್ವತ್ತು ಅಥವಾ ಜೀವಹಾನಿಗೆ ಕಾರಣವಾದರೆ, ಆತನನ್ನು ಜನಸಂದಣಿ ವಿಪತ್ತು ಮಾಡಿದ್ದಾನೆಂದು ಪರಿಗಣಿಸಬೇಕು. ಹಾಗೂ ದೈಹಿಕ ಗಾಯಗಳಿಗಾಗಿ ಕನಿಷ್ಠ 3 ವರ್ಷಗಳು ಮತ್ತು 7 ವರ್ಷಗಳವರೆಗಿನ ಕಾರಾವಾಸದ ಹಾಗೂ ಪ್ರಾಣಹಾನಿ ಪ್ರಕರಣಗಳಿಗೆ ಕನಿಷ್ಠ ಹತ್ತು ವರ್ಷಗಳಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಕಠಿಣ ಶಿಕ್ಷೆ ವಿಧಿಸಲಾಗುವುದು.

Bengaluru Stampade case
ಬೆಂಗಳೂರು ಕಾಲ್ತುಳಿತ: ಹೆಚ್ಚಿನ ಜನಸಂದಣಿ ಆಕರ್ಷಿಸುವ ಭವಿಷ್ಯದ ಕಾರ್ಯಕ್ರಮಗಳ ಸ್ಥಳಾಂತರಕ್ಕೆ ಡಿ'ಕುನ್ಹಾ ಆಯೋಗ ಶಿಫಾರಸು

ಗುಂಪುಗೂಡಿದ ಸ್ಥಳದಿಂದ ಚದುರಿಸಲು ಕರ್ತವ್ಯದಲ್ಲಿರುವ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ದರ್ಜೆಯ ಮತ್ತು ಅದಕ್ಕಿಂತ ಮೇಲಿನ ದರ್ಜೆಯ ಯಾರೇ ಪೊಲೀಸ್ ಅಧಿಕಾರಿಯ ಕಾನೂನುಬದ್ಧ ನಿರ್ದೇಶನಗಳನ್ನು ಪಾಲಿಸದಿರುವ ಅಥವಾ ಉಲ್ಲಂಘಿಸಲು ದುಷ್ಪ್ರೇರಿಸುವ ವ್ಯಕ್ತಿಗೆ ಒಂದು ತಿಂಗಳ ಅವಧಿಗೆ ಸಮುದಾಯ ಸೇವೆಯನ್ನು ಒಳಗೊಂಡಂತೆ 50 ಸಾವಿರ ರೂಪಾಯಿಗಳ ಜುಲ್ಮಾನೆಗೆ ಗುರಿಯಾಗುವ ದಂಡನೆ ವಿಧಿಸಲಾಗುತ್ತದೆ. ಈ ಅಧಿನಿಯಮದಡಿಯಲ್ಲಿನ ಅಪರಾಧಗಳು ಜಾಮೀನು ರಹಿತ ಮತ್ತು ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರಿಂದ ವಿಚಾರಣೆಗೆ ಒಳಪಡಲಿದೆ.

ಏಳು ಸಾವಿರಕ್ಕಿಂತ ಕಡಿಮೆ ಜನಸಂದಣಿ ಇದ್ದಾಗ, ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸೂಕ್ತ ವಿಚಾರಣೆಯ ನಂತರ ಅನುಮತಿ ನೀಡಬಹುದು. ಏಳು ಸಾವಿರಕ್ಕಿಂತ ಹೆಚ್ಚು ಆದರೆ ಐವತ್ತು ಸಾವಿರಕ್ಕಿಂತ ಕಡಿಮೆ ಜನಸಂದಣಿ ಇದ್ದಾಗ, ವ್ಯಾಪ್ತಿಯ ಪೊಲೀಸ್ ಉಪ ವರಿಷ್ಠಾಧಿಕಾರಿ ಅನುಮತಿ ನೀಡಬಹುದು. ಐವತ್ತು ಸಾವಿರಕ್ಕಿಂತ ಹೆಚ್ಚು ಜನಸಂದಣಿ ಇದ್ದಾಗ, ವ್ಯಾಪ್ತಿಯ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಪೊಲೀಸ್ ಆಯುಕ್ತರು ಅನುಮತಿ ನೀಡಬಹುದು. ಈ ಕಾಯ್ದೆಯಡಿಯಲ್ಲಿ ಅಪರಾಧಗಳು ಸಂಜ್ಞೇಯ, ಜಾಮೀನು ರಹಿತ ಮತ್ತು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿಚಾರಣೆಗೆ ಒಳಪಡುತ್ತವೆ.

Bengaluru Stampade case
Bengaluru stampede: ಜನಸಂದಣಿ ನಿರ್ವಹಣೆಗಾಗಿ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com