
ಬೆಂಗಳೂರು: ಬಿಹಾರದಲ್ಲಿ ಮತ ಕಳ್ಳತನ ಮತ್ತು ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತದಾರ ಅಧಿಕಾರ ಯಾತ್ರೆ ನಡೆಸುತ್ತಿದ್ದಾರೆ.
ಸಸರಾಂನಿಂದ ಆರಂಭವಾಗಿರುವ ಯಾತ್ರೆ 16 ದಿನಗಳ ಕಾಲ ನಡೆಯಲಿದ್ದು, ಸುಮಾರು 1,300 ಕಿಲೋ ಮೀಟರ್ ದೂರ ಕ್ರಮಿಸಲಿದೆ. ಬಿಹಾರದ 25 ಕ್ಕೂ ಹೆಚ್ಚು ಜಿಲ್ಲೆಗಳ ಮೂಲಕ ಇದು ಹಾದುಹೋಗಲಿದ್ದು, ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ಮುಕ್ತಾಯಗೊಳ್ಳಲಿದೆ.
ಈ ಯಾತ್ರೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಭಾಗವಹಿಸಲಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 29 ರಂದು ಬಿಹಾರಕ್ಕೆ ತೆರಳಲಿದ್ದು, ರಾಹುಲ್ ಗಾಂಧಿ ಅವರ ಮತದಾರರ ಅಧಿಕಾರ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಇದೇ ವೇಳೆ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವನ್ನು ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು. ಸೆಪ್ಟೆಂಬರ್ 22 ರಂದು ಆರಂಭವಾಗಲಿದ್ದು, ಅಕ್ಟೋಬರ್ 2ರವರೆಗೂ ಈ ಬಾರಿ 11 ದಿನಗಳ ಕಾಲ ದಸರಾ ಮಹೋತ್ಸವ ನಡೆಯಲಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಆಹ್ವಾನಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
Advertisement