
ನವಾಡ (ಬಿಹಾರ): ಎರಡು ದಿನಗಳ ಹಿಂದೆ ಬಿಹಾರದ ನವಾಡ ಜಿಲ್ಲೆಯಲ್ಲಿ ನಡೆದ ವೋಟರ್ ಅಧಿಕಾರ ಯಾತ್ರೆಯ ವೇಳೆ ಪೊಲೀಸ್ ಕಾನ್‌ಸ್ಟೆಬಲ್‌ಗೆ ಡಿಕ್ಕಿ ಹೊಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಾಹನದ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮಂಗಳವಾರ ಭಗತ್ ಸಿಂಗ್ ಚೌಕ್ ಮೂಲಕ ಯಾತ್ರೆಯು ಹಾದು ಹೋಗುತ್ತಿದ್ದಾಗ ರಾಹುಲ್ ಗಾಂಧಿ ಅವರ ವಾಹನದ ಮುಂದೆ ಪೊಲೀಸ್ ಕಾನ್‌ಸ್ಟೆಬಲ್ ಬಿದ್ದಿದ್ದರು.
ಈ ಸಂಬಂಧ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ವಿವರಗಳನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು ಎಂದು ನವಾಡಾ ಎಸ್ಪಿ ಅಭಿನವ್ ಧಿಮಾನ್ ಸುದ್ದಿಸಂಸ್ಥೆ ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಕಾನ್‌ಸ್ಟೇಬಲ್ ಆಕಸ್ಮಿಕವಾಗಿ ಬೆಂಗಾವಲು ಪಡೆಯ ವಾಹನದ ಮುಂದೆ ಬಿದ್ದಿದ್ದರಿಂದ ಅವರ ಪಾದಗಳಿಗೆ ವಾಹನವು ಸ್ವಲ್ಪ ತಾಗಿತು. ಇದರಿಂದಾಗಿ ಅವರು ಗಾಯಗೊಂಡರು ಎಂದು ಎಸ್ಪಿ ಈ ಹಿಂದೆ ಹೇಳಿದ್ದರು.
ಪೊಲೀಸ್ ಅಧಿಕಾರಿ ಮೇಲೆ ವಾಹನ ಹರಿದಿದೆ ಎಂದು ಹೇಳಿಕೊಳ್ಳುವ ವಿಡಿಯೋ ಕ್ಲಿಪ್ ಅನ್ನು ಬಿಜೆಪಿ ಹಂಚಿಕೊಂಡಿದೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಗಾಯಗೊಂಡ ಪೊಲೀಸ್ ಪೇದೆಯನ್ನು ತಮ್ಮ ತೆರೆದ ಜೀಪಿಗೆ ಕರೆತರುವಂತೆ ರಾಹುಲ್ ಗಾಂಧಿ ತಮ್ಮ ಬೆಂಬಲಿಗರನ್ನು ಕೇಳಿಕೊಳ್ಳುತ್ತಿರುವುದನ್ನು ಕಾಣಬಹುದು. ನೋವಿನಿಂದ ಬಳಲುತ್ತಿದ್ದ ಕಾನ್‌ಸ್ಟೆಬಲ್‌ಗೆ ನೀರು ಕುಡಿಸಿದ ನಂತರ, ಲೋಕಸಭೆಯ ವಿರೋಧ ಪಕ್ಷದ ನಾಯಕರು ಕುಟುಂತ್ತಾ ಸಾಗುತ್ತಿದ್ದ ಅವರನ್ನು ತಮ್ಮ ವಾಹನದಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಾರೆ.
Advertisement