
ಬೆಂಗಳೂರು: 15,188 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಡಿಸೆಂಬರ್ 2025-ಮಾರ್ಚ್ 2026ರ ನಡುವೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಲೋಕಸಭೆಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರು–ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಭಾಗವಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಎರಡೂವರೆ ಗಂಟೆಗಳಿಗೆ ಇಳಿಯಲಿದೆ. 262.4 ಕಿ.ಮೀ. ಉದ್ದದ ಮಾರ್ಗಕ್ಕೆ ರೂ.15,188 ಕೋಟಿ ವೆಚ್ಚ ಮಾಡಲಾಗುತ್ತಿದೆ. ಸದ್ಯ 4 ಪ್ಯಾಕೇಜ್‌ಗಳ ಕೆಲಸ ಮುಗಿದಿದ್ದು, ಎಲ್ಲ ಪ್ಯಾಕೇಜ್‌ಗಳ ಕಾಮಗಾರಿಗಳು 2026ಕ್ಕೆ ಮುಗಿಯಲಿವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಭೂಸ್ವಾಧೀನಕ್ಕೆ ಅಡೆತಡೆ, ತಮಿಳುನಾಡಿನಲ್ಲಿ ಜನವಸತಿ ಪ್ರದೇಶದಲ್ಲಿ ಕಾಮಗಾರಿಗೆ ಅಡ್ಡಿ ಎದುರಾದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಹೆಚ್ಚುವರಿ ಸರ್ವೀಸ್ ರಸ್ತೆಗಳು, ಧಾರ್ಮಿಕ ಪ್ರದೇಶಗಳಲ್ಲಿ ಮಾರ್ಗ ಬದಲಾವಣೆ, ಹೈಟೆನ್ಷನ್ ವಿದ್ಯುತ್ ಮಾರ್ಗಗಳ ಸ್ಥಳಾಂತರ ಮತ್ತು ಭೂ ಪರಿಹಾರ ನೀಡಿಕೆ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗಿದೆ ಎಂದು ವಿವರಿಸಿದರು.
ಕೌಂಡಿನ್ಯ ವನ್ಯಜೀವಿ ಅಭಯಾರಣ್ಯದ 10 ಕಿ.ಮೀ. ಪರಿಸರ-ಸೂಕ್ಷ್ಮ ವಲಯದೊಳಗೆ ಕೆಲಸ ಮಾಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ಅನುಮತಿ ಅಗತ್ಯವಿರುವುದರಿಂದ ಆಂಧ್ರಪ್ರದೇಶದಲ್ಲಿ ಯೋಜನೆಯು ಆರಂಭಿಕ ಹಿನ್ನಡೆ ಎದುರಿಸುತ್ತಿದೆ.
ಏತನ್ಮಧ್ಯೆ, ತಮಿಳುನಾಡು ತನ್ನದೇ ಆದ ಸವಾಲುಗಳನ್ನು ಒಡ್ಡಿದೆ. ದೊಡ್ಡ ಪ್ರಮಾಣದ ಮಣ್ಣಿನ ಕೆಲಸ ಮತ್ತು ವಸತಿ ಪ್ರದೇಶಗಳ ಬಳಿ ಬಂಡೆಗಳ ಬ್ಲಾಸ್ಟಿಂಗ್ ಅಗತ್ಯವಿದೆ. ಜತೆಗೆ, ರೈಲ್ವೆ ಮೇಲ್ಸೇತುವೆ ಅನುಮೋದನೆಯಲ್ಲಿನ ವಿಳಂಬ ಕೂಡ ಕಾಮಗಾರಿ ಹಿನ್ನಡೆಗೆ ಕಾರಣವಾಗಿದೆ ಎಂದು ತಿಳಿಸಿದರು
Advertisement