
ಬೆಂಗಳೂರು: ನಗರದ 10,000 ಗುಂಡಿಗಳ ಪಟ್ಟಿಯನ್ನು ಪೊಲೀಸರು ಸರ್ಕಾರಕ್ಕೆ ಸಲ್ಲಿಸಿದ್ದು, ಈ ಪೈಕಿ 5,377 ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದ ಗುಂಡಿಗಳನ್ನು ಶೀಘ್ರದಲ್ಲೇ ಮುಚ್ಚಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದರು.
ಬೆಂಗಳೂರಿನ ಅಭಿವೃದ್ಧಿಯ ಕುರಿತು ವಿರೋಧ ಪಕ್ಷದ ಸದಸ್ಯರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಸ್ತೆ ಗುಂಡಿ ಬಗ್ಗೆ ಸಾರ್ವಜನಿಕರು, ಪೊಲೀಸರು, ಜನಪ್ರತಿನಿಧಿಗಳಿಂದ ಸಲ್ಲಿಕೆಯಾದ ದೂರಿನಂತೆ ಸುಮಾರು 10,000 ಗುಂಡಿಗಳ ಪಟ್ಟಿ ಮಾಡಲಾಗಿದೆ. ಈ ಪೈಕಿ 5,377 ಗುಂಡಿಗಳನ್ನು ಮುಚ್ಚಲಾಗಿದ್ದು, ಬಾಕಿ ಗುಂಡಿಗಳನ್ನು ತ್ವರಿತವಾಗಿ ದುರಸ್ತಿಪಡಿಸಲಾಗುವುದು ಎಂದು ಹೇಳಿದರು.
ನಗರದ 154 ಕಿ.ಮೀ. ಉದ್ದದ ಆರ್ಟಿರಿಯಲ್ ರಸ್ತೆಗಳ ವೈಟ್ ಟಾಪಿಂಗ್‌ಗೆ 1,700 ಕೋಟಿ ರೂ., 632 ಕಿ.ಮೀ. ಉದ್ದದ ಸಬ್ ಆರ್ಟಿರಿಯಲ್ ರಸ್ತೆಗಳ ವೈಟ್ ಟಾಪಿಂಗ್‌ಗೆ 7,500 ಕೋಟಿ ರೂ. ಹಾಗೂ 450 ಕಿ.ಮೀ. ಉದ್ದದ ರಸ್ತೆಗಳ ಬ್ಲಾಕ್ ಟಾಪಿಂಗ್‌ಗೆ 699 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ.
ರಾಜಕಾಲುವೆಗಳ ಪಕ್ಕ 300 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ 3,000 ಕೋಟಿ ರೂ. ವೆಚ್ಚ ಮಾಡಲಾಗುವುದು. 44 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಮೇಲುಸೇತುವೆ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಪ್ರತಿ ಕಿ.ಮೀ.ಗೆ 120 ಕೋಟಿ ರೂ.ನಂತೆ 9,000 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ 15,000 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು,
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಯ ಕುರಿತು ಮಾತನಾಡಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ ಅಂಗೀಕಾರವಾದ ನಂತರ ಸರ್ಕಾರವು ವಾರ್ಡ್ ಪುನರ್ವಿಂಗಡಣೆಯನ್ನು ಕೈಗೆತ್ತಿಕೊಳ್ಳಲಿದೆ. ಇದಕ್ಕಾಗಿ ಬಿಜೆಪಿ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ ಕುರಿತು ಕರಡು ಅಧಿಸೂಚನೆಯನ್ನು ಜುಲೈ 19 ರಂದು ಹೊರಡಿಸಲಾಗಿದೆ. ಇದು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡುವ 74 ನೇ ತಿದ್ದುಪಡಿಯನ್ನು ಉಲ್ಲಂಘಿಸುವುದಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ ಅಡಿಯಲ್ಲಿ ಸ್ಥಾಪಿಸಲಾಗುವ ನಿಗಮಗಳ ಕಾರ್ಯನಿರ್ವಹಣೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಸರ್ಕಾರ ಸಜ್ಜಾಗಿದೆ. ಮತದಾರರ ಪಟ್ಟಿಯನ್ನು ಪರಿಶೀಲಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಅನುಮತಿ ನೀಡಿದ್ದೇವೆ. ಆಯೋಗ ಚುನಾವಣೆ ನಡೆಸಲಿದೆ ಎಂದರು.
ಸುರಂಗ ರಸ್ತೆ, ವೈಟ್ ಟಾಪಿಂಗ್, ಎಲಿವೇಟೆಡ್ ಕಾರಿಡಾರ್‌ಗಳು ಮುಂತಾದ ಕೆಲವು ದೊಡ್ಡ ಯೋಜನೆಗಳಿಗೆ ರಾಜ್ಯ ಸರ್ಕಾರವೇ ಹಣಕಾಸು ಒದಗಿಸಲಿದೆ ಎಂದೂ ಇದೇ ವೇಳೆ ತಿಳಿಸಿದರು.
Advertisement