
ಬೆಂಗಳೂರು: ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಹಾಗೂ ತೆರಿಗೆ ಪಾಲು ಕುರಿತು ಶ್ವೇತಪತ್ರ ಮಂಡಿಸಲು ರಾಜ್ಯಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.
ನಿಯಮ 69ರ ಅಡಿ ಕಾಂಗ್ರೆಸ್‌ನ ಸದಸ್ಯರಾದ ಕೆ.ಎಂ. ಶಿವಲಿಂಗೇಗೌಡ, ಎನ್.ಎಚ್.ಕೋನರೆಡ್ಡಿ, ಶರತ್ ಬಚ್ಚೇಗೌಡ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ್ದರು.
ಇದಕ್ಕೆ ಶುಕ್ರವಾರ ಸದನದಲ್ಲಿ ಉತ್ತರಿಸಿದ ಸಿಎಂ, ಕೇಂದ್ರದ ಅನುದಾನ, ತೆರಿಗೆ ಪಾಲು ಬಗ್ಗೆ ಶ್ವೇತ ಪತ್ರ ಹೊರಡಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಕೆಲ ವರ್ಷಗಳ ಹಿಂದೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಶೇ.75 ಮತ್ತು ರಾಜ್ಯ ಶೇ.25ರಷ್ಟು ಅನುಪಾತದಲ್ಲಿ ಅನುದಾನ ನೀಡಲಾಗುತ್ತಿತ್ತು. ಮೋದಿ ಅಧಿಕಾರಕ್ಕೆ ಬಂದ ಬಳಿಕ ಆ ಪ್ರಮಾಣವನ್ನು ಶೇ.40ಕ್ಕೆ ಇಳಿಸಲಾಗಿದೆ. ಇದರರ್ಥ ಕೇಂದ್ರವು ತನ್ನ ಪಾಲನ್ನು ಶೇ. 60 ರಷ್ಟು ಕಡಿತಗೊಳಿಸಿದೆ ಎಂದು ತಿಳಿಸಿದರು. ಈ ವೇಳೆ ಈ ಸಂಬಂಧ ಶ್ವೇತ್ರ ಪತ್ರ ಹೊರಡಿಸುವಂತೆ ಸದಸ್ಯರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಶ್ವೇತ ಪತ್ರ ಹೊರಡಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಶೀಘ್ರದಲ್ಲೇ ಮಂಡಿಸುತ್ತೇವೆಂದು ಎಂದು ಹೇಳಿದರು.
ಇದಕ್ಕೆ ತಿರುಗೇಟು ನೀಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ನೀವು ಶ್ವೇತಪತ್ರವನ್ನಾದರೂ ಹೊರಡಿಸಿ ಬ್ಲ್ಯಾಕ್, ಯೆಲ್ಲೋ, ಬ್ಲೂé ಪೇಪರ್‌ನ್ನಾದರೂ ಪ್ರಕಟಿಸಿ. ಆದರೆ ಕೇಂದ್ರ ಸರಕಾರ ರೈಲ್ವೆ, ಹೆದ್ದಾರಿ ಸಹಿತ ಎಲ್ಲ ಯೋಜನೆಗಳನ್ನೂ ಅದರಲ್ಲಿ ಸೇರಿಸಿ. ಇಲ್ಲವಾದರೆ ನಾವು ಇನ್ನೊಂದು ಶ್ವೇತಪತ್ರ ಹೊರಡಿಸಬೇಕಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಲು ಕೇಂದ್ರ ಸರಕಾರದ ಅನುದಾನ ತಾರತಮ್ಯ ಕಾರಣ ಹೊರತು ಗ್ಯಾರಂಟಿ ಯೋಜನೆಗಳಲ್ಲ. ಹಾಗಿದ್ದರೂ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಶಾಸಕರಿಗೆ ಅಭಿವೃದ್ಧಿ ಕಾರ್ಯಕ್ಕಾಗಿ ಸರಕಾರ ಶೀಘ್ರ ಅನುದಾನ ಬಿಡುಗಡೆ ಮಾಡಲಿದ್ದು, ಶಾಸಕರಿಂದಲೇ ಕ್ರಿಯಾ ಯೋಜನೆ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ನಿಯಮ 69ರ ಅನ್ವಯ ಅಭಿವೃದ್ಧಿ ಹಿನ್ನಡೆ ಬಗ್ಗೆ ನಡೆಸಿದ ಚರ್ಚೆಗೆ ಉತ್ತರ ನೀಡಿದ ಅವರು, ಶಾಸಕರಿಗೆ ವಿಶೇಷ ಅನುದಾನ, ಅತಿವೃಷ್ಟಿ ಪರಿಹಾರ ಇತ್ಯಾದಿ ಉದ್ದೇಶಕ್ಕಾಗಿ 8000 ಕೋಟಿ ರೂ. ಅನ್ನು ಈ ವರ್ಷದ ಬಜೆಟ್‌ನಲ್ಲಿ ಕಾದಿರಿಸಲಾಗಿದೆ. 224 ಕ್ಷೇತ್ರದ ಶಾಸಕರಿಗೂ ಅನುದಾನ ಬಿಡುಗಡೆ ಮಾಡಲಾಗುವುದು. ಎಲ್ಲರಿಗೂ ಅನುದಾನ ನೀಡುತ್ತೇನೆ. ಆದರೆ ಇಷ್ಟೇ ಕೊಡುತ್ತೇನೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಇದಕ್ಕೆ ಬಿಜೆಪಿ-ಜೆಡಿಎಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿ, ಎಲ್ಲ ಶಾಸಕರಿಗೂ ಸಮಾನ ಅನುದಾನ ನೀಡಬೇಕೆಂದು ಸಭಾಧ್ಯಕ್ಷರ ಪೀಠದ ಎದುರು ತೆರಳಿ ಪ್ರತಿಭಟನೆ ನಡೆಸಿದರು.
ಯಾವ ಸರಕಾರವೇ ಆದರೂ ಎಲ್ಲರಿಗೂ ಸಮಾನ ಅನುದಾನ ನೀಡುವುದಿಲ್ಲ. ಆದರೆ, ನಿಮ್ಮೆಲ್ಲರ ಜೊತೆಗೂ ನಾನು ಸಭೆ ನಡೆಸಿ, ಶಾಸಕರಿಂದಲೇ ಕ್ರಿಯಾ ಯೋಜನೆ ಪಡೆದು ಅನುದಾನ ನೀಡುವುದಕ್ಕೆ ವ್ಯವಸ್ಥೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದುಕೊಂಡರು.
ಗ್ಯಾರಂಟಿಯಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಪರೋಕ್ಷವಾಗಿ ನೀವು ಆರೋಪಿಸಿದ್ದಿರಿ. ಆದರೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ 96,000 ಕೋಟಿ ರೂ. ಅನ್ನು ಗ್ಯಾರಂಟಿಗಳಿಗಾಗಿ ನೀಡಿದ್ದೇವೆ. ಇದರಿಂದಾಗಿ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಿದೆ. ಹೀಗಾಗಿ, ಜನರ ತಲಾದಾಯ ಹೆಚ್ಚಿದೆ. ಗ್ಯಾರಂಟಿಗಳು ಅಭಿವೃದ್ಧಿ ಕಾರ್ಯಗಳಲ್ಲ ಎಂದಾದರೆ ತಲಾದಾಯ ಹೇಗೆ ಹೆಚ್ಚಾಗುತ್ತಿತ್ತುೃ? ಬೆಂಗಳೂರಿನಲ್ಲಿ ಶೇ.23, ಹುಬ್ಬಳ್ಳಿ-ಧಾರವಾಡದಲ್ಲಿ ಶೇ.21ರಷ್ಟು ಉದ್ಯೋಗ ಸೃಜನೆ ಹೇಗೆ ಹೆಚ್ಚಾಗುತ್ತಿತ್ತು? ನಾವು ವಾರ್ಷಿಕವಾಗಿ ಒಂದು ಕುಟುಂಬಕ್ಕೆ 40-50 ಸಾವಿರ ಕೋಟಿ ರೂ.ನ್ನು ನೀಡುತ್ತಿದ್ದೇವೆ. ಇದು ಅಭಿವೃದ್ಧಿಯಲ್ಲವೇ? ಎಂದು ಪ್ರಶ್ನಿಸಿದರು.
14ನೆ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ ತೆರಿಗೆ ಪಾಲು ಶೇ.4.70 ನಿಗದಿ ಮಾಡಿತ್ತು. ಆದರೆ, 15ನೆ ಹಣಕಾಸು ಆಯೋಗವು ಇದನ್ನು ಶೇ.3.60ಕ್ಕೆ ಇಳಿಸಿತು. ಇದರಿಂದಾಗಿ, ಐದು ವರ್ಷಗಳಲ್ಲಿ ನಮ್ಮ ರಾಜ್ಯಕ್ಕೆ 68 ಸಾವಿರ ಕೋಟಿ ರೂ.ನಷ್ಟವಾಯಿತು. ಈ ಹಣ ಇದ್ದಿದ್ದರೆ ರಾಜ್ಯದ ಅಭಿವೃದ್ಧಿಗೆ ಬಳಕೆಯಾಗುತ್ತಿರಲಿಲ್ಲವೇ? ಎಂದು ಸಿದ್ದರಾಮಯ್ಯ ಕೇಳಿದರು.
15ನೇ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ ನಷ್ಟವಾಗಿರುವುದನ್ನು ಗಮನಿಸಿ 5495 ಕೋಟಿ ರೂ.ವಿಶೇಷ ಅನುದಾನ ನೀಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ನೀಡುವುದಾಗಿ ಕೇಂದ್ರ ಸರಕಾರ ಬಜೆಟ್‍ನಲ್ಲಿ ಘೋಷಣೆ ಮಾಡಿತು. ಆದರೆ, ಒಂದು ರೂಪಾಯಿಯೂ ಬಿಡುಗಡೆ ಮಾಡಿಲ್ಲ. ಇದರಿಂದಾಗಿ, ಒಟ್ಟಾರೆ ನಮಗೆ 80 ಸಾವಿರ ಕೋಟಿ ರೂ.ನಷ್ಟವಾಯಿತು ಎಂದು ಮಾಹಿತಿ ನೀಡಿದರು.
4.09 ಲಕ್ಷ ಕೋಟಿ ರೂ.ಗಳ ಬಜೆಟ್‍ನಲ್ಲಿ 1.69 ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ವೆಚ್ಚ ಮಾಡಲಾಗುವುದು. ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟರಿಗೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಶೇ.24.1ರಷ್ಟು ಅನುದಾನ ಒದಗಿಸಲಾಗಿದೆ. ಅದರಂತೆ, ಈ ವರ್ಷ 42,017 ಕೋಟಿ ರೂ.ಗಳ ಅನುದಾನ ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ಬಿಜೆಪಿ ಶಾಸಕರು ಅನುದಾನ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಬಜೆಟ್‍ನಲ್ಲಿ 8 ಸಾವಿರ ಕೋಟಿ ರೂ.ಗಳನ್ನು ಮೂಲಭೂತ ಸೌಕರ್ಯ, ರಸ್ತೆ, ಸೇತುವೆಗಳಿಗಾಗಿ ಮೀಸಲಿಟ್ಟಿದ್ದು, ಅದನ್ನು ಎಲ್ಲ ಶಾಸಕರಿಗೂ ಹಂಚಿಕೆ ಮಾಡಲಾಗುವುದು. ಬಿಜೆಪಿ ಸರಕಾರದ ಅವಧಿಯಲ್ಲಿ ಹಣ ಇಲ್ಲದೆಯೆ 2.70 ಲಕ್ಷ ಕೋಟಿ ರೂ.ಗಳ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಅಲ್ಲದೇ, ಮುಖ್ಯಮಂತ್ರಿಯ ವಿವೇಚನಾ ಕೋಟದಡಿಯಲ್ಲಿ 1.66 ಲಕ್ಷ ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು ಎಂದು ಹೇಳಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಆದ ಈ ತಪ್ಪುಗಳಿಂದಾಗಿ ನಾವು ಕಷ್ಟ ಅನುಭವಿಸುವಂತಾಗಿದೆಯೆ ಹೊರತು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಸರಕಾರಕ್ಕೆ ಹಣದ ಮುಗ್ಗಟ್ಟು ಆಗಿಲ್ಲ. 2013-18ರ ನಡುವೆ ನಾನು ಮುಖ್ಯಮಂತ್ರಿ ಆಗಿದ್ದಾಗ ಸುವರ್ಣ ಯುಗ ಆಗ ಹಣಕಾಸಿಗೆ ಯಾವುದೆ ತೊಂದರೆ ಇರಲಿಲ್ಲ ಎಂದು ಅವರು ತಿಳಿಸಿದರು.
ರಾಜ್ಯದ ಎಲ್ಲ ಕಡೆ ಹೆಚ್ಚು ಮಳೆಯಿಂದಾಗಿ ಅತಿವೃಷ್ಟಿಯಾಗಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೆ ಸಮೀಕ್ಷೆ ಮಾಡಿ, ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ತೆಂಗು, ಅಡಿಕೆ ಬೆಳೆ ನಷ್ಟಕ್ಕೆ ಪರಿಹಾರ ನೀಡಲಾಗುವುದು. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ. ಸಂಪನ್ಮೂಲಗಳನ್ನು ನೋಡಿಕೊಂಡು ರಾಜ್ಯದ 224 ಕ್ಷೇತ್ರಗಳಿಗೂ ಅನುದಾನ ನೀಡುತ್ತೇನೆ.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾವು ರಾಜ್ಯದ ಜನತೆಗೆ 692 ಭರವಸೆಗಳನ್ನು ನೀಡಿದ್ದೆವು. ಎರಡು ವರ್ಷ ಮೂರು ತಿಂಗಳಲ್ಲಿ 264 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಭರವಸೆಗಳನ್ನು ಈಡೇರಿಸುತ್ತೇವೆ. ನಮ್ಮದು ನುಡಿದಂತೆ ನಡೆಯುವ ಕಾಂಗ್ರೆಸ್ ಸರಕಾರ. 2028ರಲ್ಲಿಯೂ ರಾಜ್ಯದ ಜನ ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.
Advertisement