ತುಮಕೂರು-ಬೆಂಗಳೂರು ಮಧ್ಯೆ 4 ರೈಲು ಮಾರ್ಗ, ಶೀಘ್ರದಲ್ಲೇ ಕಾಮಗಾರಿ ಆರಂಭ: ಕೇಂದ್ರ ಸಚಿವ ವಿ ಸೋಮಣ್ಣ

ಮು೦ದಿನ 10-15 ವರ್ಷ ಗಳಲ್ಲಿ ತುಮಕೂರು ಬೆಂಗಳೂರಿಗೆ ಸರಿಸಮನಾಗಿ ಬೆಳವಣಿಗೆಯಾಗುತ್ತದೆ. ಇದಕ್ಕೆ ಅಗತ್ಯ ಇರುವ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.
V.Somanna
ವಿ ಸೋಮಣ್ಣ
Updated on

ತುಮಕೂರು: ಚೆನ್ನೈ-ಬೆಂಗಳೂರು ರಸ್ತೆ ಕಾರಿಡಾರ್‌ನಂತೆ ತುಮಕೂರು-ಬೆಂಗಳೂರು ರೈಲ್ವೆ ಕಾರಿಡಾರ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶನಿವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು- ಬೆಂಗಳೂರು ನಡುವೆ ನಾಲ್ಕು ಪಥದ ರೈಲ್ವೆ ಹಳಿ ನಿರ್ಮಾಣಕ್ಕೆ ಸರ್ವೆ ಆಗಿದ್ದು, ಡಿಪಿಆ‌ ಆಗಬೇಕಾಗಿದೆ ಎಂದು ಹೇಳಿದರು.

ನಗರದ ಹೊರವಲಯದ ತಿಮ್ಮರಾಜನಹಳ್ಳಿ ಬಳಿ ಬೃಹತ್ ರೈಲ್ವೆ ಗೋದಾಮು ನಿರ್ಮಾಣ ಸಂಬಂಧ ಕೆಐಎಡಿಬಿ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಪಾವಗಡ-ಮಡಕಶಿರಾ-ಮಧುಗಿರಿ ಮಾರ್ಗದ ರೈಲು ಮಾರ್ಗದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಹಾಗೆಯೇ ತುಮಕೂರು-ಊರುಕೆರೆ, ಸಿರಾ- ತಾವರೆಕೆರೆ ಮಾರ್ಗದ ರೈಲು ಮಾರ್ಗ ಕಾಮಗಾರಿಗೆ ಈಗಾಗಲೇ ಟೆಂಡರ್ ಆಗಿದೆ.

ಮು೦ದಿನ 10-15 ವರ್ಷ ಗಳಲ್ಲಿ ತುಮಕೂರು ಬೆಂಗಳೂರಿಗೆ ಸರಿಸಮನಾಗಿ ಬೆಳವಣಿಗೆಯಾಗುತ್ತದೆ. ಇದಕ್ಕೆ ಅಗತ್ಯ ಇರುವ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರೂ. 4,500 ಕೋಟಿ ವೆಚ್ಚದ ಹಾಸನ, ತಿಪಟೂರು, ಚಿಕ್ಕನಾಯಕನಹಳ್ಳಿ, ಹಿರಿಯೂರು ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆಯ ಡಿಪಿಆರ್ ಪೂರ್ಣಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದರು.

ಇದೇ ವೇಳೆ ನಗರದ ಮರಳೂರಿನಲ್ಲಿರುವ ತುಮಕೂರು ಮಹಾನಗರ ಪಾಲಿಕೆಯ ಮಾಲೀಕತ್ವದ 2 ಎಕರೆ ಜಾಗವನ್ನು ಕಾಂಗ್ರೆಸ್ ಪಕ್ಷದ ಭವನ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಕಾಂಗ್ರೆಸ್ ಭವನ ಟ್ರಸ್ಟ್ ಗೆ ನೀಡಿರುವ ಕಾರ್ಯ ಖಂಡನೀಯ ಎಂದ ಅವರು, ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಜಾಗವನ್ನು ವಾಪಸ್ ಮಹಾನಗರ ಪಾಲಿಕೆಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

V.Somanna
ಪಾಪದ ಕೃತ್ಯಕ್ಕೆ ಬೆಲೆ ತೆರಬೇಕಾಗುತ್ತೆ, ಧರ್ಮಸ್ಥಳಕ್ಕೆ ಹೋಗಿ ಪಾಪ ಕಳೆದುಕೊಳ್ಳಿ: ಸಿಎಂ ಸಿದ್ದರಾಮಯ್ಯಗೆ ಸೋಮಣ್ಣ

ಮಹಾನಗರ ಪಾಲಿಕೆಯ ಜಾಗವನ್ನು ಕಾಂಗ್ರೆಸ್ ಪಕ್ಷಕ್ಕೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ಈ ಜಮೀನಿನ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳಿಂದಲೂ ಅಗತ್ಯ ದಾಖಲಾತಿ ಗಳನ್ನು ಸಂಗ್ರಹಿಸಿದ್ದೇನೆ. ಕೂಡಲೇ ಕಾಂಗ್ರೆಸ್ ಪಕ್ಷ ಈ ಜಾಗವನ್ನು ಪಾಲಿಕೆಗೆ ವಾಪಸ್ ನೀಡಬೇಕು. ತುಮಕೂರು ಉಸ್ತುವಾರಿ ಸಚಿವರಾಗಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು 45 ವರ್ಷಗಳ ರಾಜಕೀಯ ಅನುಭವ ಹೊಂದಿದ್ದಾರೆ. ಮಹಾನಗರ ಪಾಲಿಕೆಯ ಮಾಲೀಕತ್ವದ ಜಾಗವನ್ನು ಯಾವ ಉದ್ದೇಶಕ್ಕೆ ಬಳಸುತ್ತಿದ್ದರೋ ಅದೇ ಉದ್ದೇಶಕ್ಕೆ ಬಳಸಲು ಅನುವು ಮಾಡಿಕೊಡಬೇಕು ಎಂದರು.

ಸದರಿ ಜಾಗವನ್ನು ನಗರದ ಕಸ ವಿಲೇವಾರಿ ಮಾಡಲು ಬಳಸಲಾಗುತ್ತಿತ್ತು ಎಂಬ ಮಾಹಿತಿ ಇದೆ. ಸದ್ಯ ಅಜ್ಜಗೊಂಡನಹಳ್ಳಿ ಬಳಿ ಕಸ ವಿಲೇವಾರಿ ಮಾಡುತ್ತಿರುವುದರಿಂದ ಈ ಜಮೀನು ಖಾಲಿ ಇತ್ತು. ಈ ಜಾಗವನ್ನು ಸಚಿವರು ರಾಜೀವ ಗಾಂಧಿ ಅರ್ಬನ್ ಡೆವಲಪ್‌ಮೆಂಟ್‌ ಸಂಸ್ಥೆಗೆ ಕಾನೂನಿನ್ವಯ ನೀಡಲು ಸೂಚಿಸಿದ್ದಾರೆ ಎಂದ ಅವರು, ರಾಜ್ಯ ಸರ್ಕಾರ ಕಳೆದ ಮೇ 27 ರಂದು ಆದೇಶ ಹೊರಡಿಸಿ, ಸದರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್ ಹಂಚಿಕೆ ಮಾಡಿದೆ. ಇದರ ಎಸ್.ಆರ್. ವ್ಯಾಲ್ಯೂ ಶೇ. 5 ರಷ್ಟು ನಿಗದಿಪಡಿಸಿದೆ ಎಂದು ಹೇಳಿದರು.

ಸದರಿ ಜಮೀನಿನ ಸರ್ಕಾರಿ ದರವನ್ನು ಪ್ರತಿ ಎಕರೆಗೆ 1.7 ಕೋಟಿ ರೂ. (2 ಎಕರೆಗೆ 3.4 ಕೋಟಿ) ನಿಗದಿಪಡಿಸಿದ್ದಾರೆ. ಆದರೆ, ಈ ಜಮೀನಿನ ಪ್ರಸ್ತುತ ಮಾರುಕಟ್ಟೆ ದರ 21 ಕೋಟಿ ರುಪಾಯಿಗಳು ಎಂದು ಅಂದಾಜಿಸಬಹುದಾಗಿದೆ ಎಂದು ಹೇಳಿದರು.

V.Somanna
ದೇವರೇ ಬಂದು ಹೇಳಿದರೂ ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ: ವಿ ಸೋಮಣ್ಣ

ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದನ್ನು ಪ್ರಶ್ನಿಸಲು ಹೋದ ಬಿಜೆಪಿ ಕಾರ್ಯಕರ್ತರೊಂದಿಗೆ ಪೊಲೀಸರು ನಡೆದುಕೊಂಡಿರುವ ರೀತಿ ಸಾಧುವಲ್ಲ. ಪೊಲೀಸರು ಯಾವುದೇ ಪಕ್ಷದ ಬಾಲಗೋಂಚಿ ಯಾಗಬಾರದು. ಮುಂದಿನ ದಿನಗಳಲ್ಲಿ ಇದಕ್ಕೆ ಪೊಲೀಸರೇ ಬಲಿಪಶುಗಳಾಗುತ್ತಾರೆ ಎಂಬುದನ್ನು ಮರೆಯ ಬಾರದು. ತಮ್ಮ ಕರ್ತವ್ಯವನ್ನು ಕಾನೂನು ಪ್ರಕಾರ ನಿರ್ವಹಿಸಬೇಕು, ಯಾರಿಗೂ ಅಗೌರವ ತೋರುವ ಕೆಲಸ ಮಾಡಬಾರದು ಎಂದು ಹೇಳಿದರು.

ಮಹಾನಗರ ಪಾಲಿಕೆಯ ಜಾಗವನ್ನು ಕಾಂಗ್ರೆಸ್ ಭವನಕ್ಕೆ ಅಕ್ರಮವಾಗಿ ನೋಂದಣಿ ಮತ್ತು ಖಾತೆ ಮಾಡಿಕೊಟ್ಟಿರುವುದನ್ನು ಯಾರು ಬೇಕಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆ ಕಾಲ ಸದ್ಯದಲ್ಲೇ ಬರಬಹುದು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com