ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ ರೂ. 28,000 ಕೋಟಿ ಸಾಲ ವಿತರಣೆಯ ಗುರಿ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ 28,516 ಸಹಕಾರ ಸಂಘಗಳು ಲಾಭದಲ್ಲಿದ್ದು, 14,670 ಸಂಘಗಳು ನಷ್ಟದಲ್ಲಿವೆ. ಇದರಲ್ಲಿ 2,200 ಹಾಲು ಉತ್ಪಾದಕ ಸಂಘಗಳು ನಷ್ಟದಲ್ಲಿವೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 37ಲಕ್ಷ ರೈತರಿಗೆ ರೂ.28,000 ಕೋಟಿ ಸಾಲ ವಿತರಣೆಯ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜುಲೈ ಅಂತ್ಯದವರೆಗೆ 8,69,284 ರೈತರಿಗೆ ರೂ.8,362.68 ಕೋಟಿ ಸಾಲ ವಿತರಿಸಲಾಗಿದ್ದು, ರೈತರಿಗೆ ಸಕಾಲದಲ್ಲಿ ಕೃಷಿ ಸಾಲ ಸಿಗುವುದನ್ನು ಪ್ರತಿ ಜಿಲ್ಲೆಯಲ್ಲೂ ಖಾತ್ರಿಪಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ನಬಾರ್ಡ್ ರಿಯಾಯಿತಿ ಬಡ್ಡಿ ದರದ ಸಾಲದ ಮಿತಿಯನ್ನು ಹಿಂದಿನ ಸಾಲಿನಲ್ಲಿದ್ದ ರೂ.5,600 ಕೋಟಿಗಳಿಂದ ರೂ.3,236.11 ಕೋಟಿಗೆ ಅಂದರೆ ಶೇ.42.21ರಷ್ಟು ಕಡಿಮೆ ಮಾಡಿದೆ. ಆದರೂ ಸಾಲ ವಿತರಣೆಯಲ್ಲಿ ಶೇ.96.07 ರಷ್ಟು ಪ್ರಗತಿ ಸಾಧಿಸಲಾಗಿದೆ. 2024-25ನೇ ಸಾಲಿನಲ್ಲಿ 29,75,598 ರೈತರಿಗೆ 25,939.09 ಕೋಟಿ ಕೃಷಿ ಸಾಲ ವಿತರಣೆ ಮಾಡಲಾಗಿದೆ.

ರಾಜ್ಯದಲ್ಲಿ 14,670 ಸಂಘಗಳು ನಷ್ಟದಲ್ಲಿವೆ: ರಾಜ್ಯದಲ್ಲಿ 28,516 ಸಹಕಾರ ಸಂಘಗಳು ಲಾಭದಲ್ಲಿದ್ದು, 14,670 ಸಂಘಗಳು ನಷ್ಟದಲ್ಲಿವೆ. ಇದರಲ್ಲಿ 2,200 ಹಾಲು ಉತ್ಪಾದಕ ಸಂಘಗಳು ನಷ್ಟದಲ್ಲಿವೆ. ಹಾಲು ಉತ್ಪಾದಕ ಸಹಕಾರ ಸಂಘಗಳ ವೆಚ್ಚದ ಮೇಲೆ ನಿಗಾ ಇರಿಸಬೇಕು. ಹಾಲು ಉತ್ಪಾದನೆಯನ್ನು ಹೆಚ್ಚಿಸುವುದು ಸಂಘಗಳ ಕಾರ್ಯದರ್ಶಿಗಳ ಜವಾಬ್ದಾರಿ. ಹಾಲು ಉತ್ಪಾದಕ ಸಹಕಾರ ಸಂಘಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕನ್ನಡ ಸಾಹಿತ್ಯ ಪರಿಷತ್‌‌ನ ಅವ್ಯವಹಾರ: ಕನ್ನಡ ಸಾಹಿತ್ಯ ಪರಿಷತ್‌‌ನ ಅವ್ಯವಹಾರಗಳ ಕುರಿತು ಡಿಆರ್‌ಸಿಎಸ್ ತನಿಖೆ ನಡೆಸುತ್ತಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಕೆಲವು ಸದಸ್ಯರ ಸದಸ್ಯತ್ವವನ್ನು ಪರಿಷತ್ ರದ್ದುಪಡಿಸುತ್ತಿರುವ ಕುರಿತು ದೂರುಗಳು ಬಂದಿದ್ದು, ಈ ಕುರಿತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಹಕಾರ ಸಂಘಗಳ ಹಿರಿಯ ನಿರೀಕ್ಷಕರ 126 ಹುದ್ದೆಗಳು ಹಾಗೂ ಸಹಕಾರ ಸಂಘಗಳ ನಿರೀಕ್ಷಕರ 403 ಹುದ್ದೆಗಳು ಖಾಲಿಯಿವೆ. ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸಬೇಕು. ಸಹಕಾರ ಸಂಘಗಳ ನಿಬಂಧಕರ ಕಚೇರಿಯ ವ್ಯಾಪ್ತಿಯ ಸೇವೆಗಳನ್ನು ಗಣಕೀಕರಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.

ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಗಿರವಿದಾರ ಸಂಸ್ಥೆಗಳು ಹಾಗೂ ಚೀಟಿ ಸಂಸ್ಥೆಗಳ ಮೇಲೆ ನಿಗಾ ಇರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಾಜ್ಯದಲ್ಲಿ ಸಹಕಾರಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಹಕಾರ ಇಲಾಖೆ ಅಧಿಕಾರಿಗಳು ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

CM Siddaramaiah
ಕೇಂದ್ರದ ಅನುದಾನ, ತೆರಿಗೆ ಪಾಲು ಬಗ್ಗೆ ಶ್ವೇತ ಪತ್ರ ಮಂಡಿಸಲು ಸರ್ಕಾರ ಸಿದ್ಧ: ಸಿಎಂ ಸಿದ್ದರಾಮಯ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com