
ಬೆಂಗಳೂರು: ಹೋಟೆಲ್‌ನಲ್ಲಿ ಮದ್ಯಪಾನಕ್ಕೆ ಅವಕಾಶ ಮಾಡಿಕೊಟ್ಟಿದ್ದನ್ನು ಪ್ರಶ್ನಿಸಿದ ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ಕಾನ್‌ಸ್ಟೆಬಲ್ ನನ್ನು ಬಂಧನಕ್ಕೊಳಪಡಿಸಿ ಅಮಾನತು ಮಾಡಲಾಗಿದೆ.
ಚಾಮರಾಜಪೇಟೆ ಠಾಣೆ ಕಾನ್‌ಸ್ಟೆಬಲ್ ಮಧೂಸೂದನ್ ಅಮಾನತುಗೊಂಡ ವ್ಯಕ್ತಿ. ಭಾನುವಾರ ರಾತ್ರಿ 8.30 ರಿಂದ ರಾತ್ರಿ 9.30 ರ ನಡುವೆ ಈ ಘಟನೆ ನಡೆದಿದೆ.
ಗ್ರಾಹಕರಿಗೆ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದ ಹೋಟೆಲ್ ವಿರುದ್ಧ ಕೆ.ಪಿ. ಅಗ್ರಹಾರ ಪೊಲೀಸರಿಗೆ ದೂರು ಬಂದಿತ್ತು.
ಮಾಗಡಿ ರಸ್ತೆ ಟೋಲ್‌ಗೇಟ್ ಬಳಿಯ ಮಹಾಲಕ್ಷ್ಮಿ ಬಾರ್ ಪಕ್ಕದಲ್ಲಿ ಹೆಡ್ ಕಾನ್‌ಸ್ಟೆಬಲ್ ಮಧೂಸೂದನ್'ಗೆ ಪರಿಚಿತ ವ್ಯಕ್ತಿಯೊಬ್ಬರು ಹೋಟೆಲ್ ನಡೆಸುತ್ತಿದ್ದಾರೆನ್ನಲಾಗಿತ್ತು.
ದೂರು ಹಿನ್ನೆಲೆ ಪೊಲೀಸರು ಹೋಟೆಲ್ ಅನ್ನು ಶೋಧಿಸಲು ಹೋದಾಗ, ಮಧುಸೂಧನ್ ಸ್ಥಳಕ್ಕೆ ಧಾವಿಸಿ. ಕರ್ತವ್ಯ ನಿರ್ವಹಿಸದಂತೆ ತಡೆಯಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿಯೂ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿದ್ದಾರೆಂದು ಹೇಳಲಾಗುತ್ತಿದೆ.
ಬಳಿಕ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್, ಇದನ್ನು ತಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇದೀಗ ಹೆಡ್ ಕಾನ್‌ಸ್ಟೆಬಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ, ಅಲ್ಲದೆ, ಇಲಾಖಾ ವಿಚಾರಣೆಯವರೆಗೆ ಅಮಾನತುಗೊಳಿಸಲಾಗಿದೆ.
ಮಧುಸೂಧನ್ ಬಂಧನದ ನಂತರ, ಸ್ಥಳೀಯ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ, ಪ್ರಕರಣ ಸಂಬಂಧ ಹೋಟೆಲ್ ಮಾಲೀಕ ಮಂಜುನಾಥ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ.
ಗ್ರಾಹಕರು ಹೋಟೆಲ್ ಒಳಗೆ ಮಾತ್ರವಲ್ಲದೆ ಹೊರಗೂ ಮದ್ಯ ಸೇವಿಸುತ್ತಿದ್ದರು. ನಾವು ಪರಿಶೀಲಿಸಲು ಹೋದಾಗ, ಕೆಲವರು ಓಡಿಹೋದರು. ಹೋಟೆಲ್ ಮಾಲೀಕರನ್ನು ಮದ್ಯದ ಪರವಾನಗಿ ತೋರಿಸುವಂತೆ ಸೂಚಿಸಿದಾಗ, ಇಲ್ಲ ಎಂದರು. ಇದೇ ವೇಳೆ ಮಧುಸೂಧನ್ ಕೂಡ ಸ್ಥಳಕ್ಕೆ ಬಂದು, ಪೊಲೀಸ್ ಎಂದು ಪರಿಚಯಿಸಿಕೊಂಡ. ನಂತರ ಹೋಟೆಲ್ ತನಗೆ ಸೇರಿದ್ದು ಎಂದು ಹೇಳಿಕೊಂಡು ಗ್ರಾಹಕರಿಗೆ ಮದ್ಯ ಸೇವಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದ. ಬಳಿಕ ಅಧಿಕಾರಿಗಳು ಮತ್ತು ರಾಜಕಾರಣಿಗಳೊಂದಿಗೆ ಸಂಪರ್ಕ ಹೊಂದಿರುವುದಾಗಿಯೂ, ತನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ. ಇದೇ ವೇಳೆ ಪೊಲೀಸರನ್ನು ನಿಂದಿಸಲು ಆರಂಭಿಸಿ, ಹಲ್ಲೆಗೆ ಮುಂದಾಗಿದ್ದ ಎಂದು ದೂರಿನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
Advertisement