
ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ‘ಆರೆಂಜ್ ಅಲರ್ಟ್’ ಘೋಷಿಸಿದೆ.
ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯ ಹಲವು ಭಾಗಗಳಲ್ಲಿ ಇಂದು ಬೆಳಿಗ್ಗೆ ಭಾರೀ ಮಳೆಯಾಗಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಕಲಬುರಗಿ ಜಿಲ್ಲೆಯಲ್ಲಿ, ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಹೆಚ್ಚಿನ ಪ್ರಮಾಣದ ಹುಚ್ಚೆಳ್ಳು (Niger Seeds) ಬೆಳೆ ನಾಶವಾಗಿದ್ದು, ರೈತರಿಗೆ ಭಾರೀ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹಲ್ಕಟ್ಟ ಗ್ರಾಮದಲ್ಲಿ ಸಂಗ್ರಹವಾಗಿದ್ದ 100 ಕ್ವಿಂಟಾಲ್‌ಗೂ ಹೆಚ್ಚು ಹುಚ್ಚೆಳ್ಳಿಗೆ ಮಳೆನೀರು ನುಗ್ಗಿ ಹಾನಿಯಾಗಿದೆ. ಗ್ರಾಮದ ಹೊರವಲಯದಲ್ಲಿ ಇರಿಸಲಾಗಿದ್ದ ಬೆಳೆ ಕೊಚ್ಚಿಹೋಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಇಂದು ಬೆಳಿಗ್ಗೆಯೂ ಭಾರಿ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿಯೂ ಇಂದು ಬೆಳಿಗ್ಗೆ ಮತ್ತೆ ಮಳೆ ಆರಂಭವಾಗಿದ್ದು, ಇದರಿಂದಾಗಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಶಾಲೆಗಳು, ಕಾಲೇಜುಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿದೆ.
ಇನ್ನು ರಾಯಚೂರು ಜಿಲ್ಲೆಯಲ್ಲಿ, ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಲಿಂಗಸುಗೂರು ತಾಲ್ಲೂಕಿನ ಭೂಪುರ ಗ್ರಾಮದಲ್ಲಿ, ಚರಂಡಿ ನೀರು ಹಲವಾರು ಮನೆಗಳಿಗೆ ನುಗ್ಗಿ ನಿವಾಸಿಗಳಿಗೆ ತೊಂದರೆ ಉಂಟುಮಾಡಿದೆ. ಮನೆಗಳ ಒಳಗೆ ಮೊಣಕಾಲು ಮಟ್ಟದವರೆಗೆ ನೀರು ತುಂಬಿದ್ದು, ಆಹಾರ ಧಾನ್ಯಗಳು, ಪಾತ್ರೆಗಳು, ಬಟ್ಟೆ ಮತ್ತು ಇತರ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ.
ಈ ನಡುವೆ ಚರಂಡಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಏತನ್ಮಧ್ಯೆ ತುಂಗಭದ್ರಾ ಜಲಾಶಯದ ಬಳಿ ವಾಸಿಸುವ ನಿವಾಸಿಗಳಿಗೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಪ್ರಸ್ತುತ ತುಂಗಭದ್ರಾ ಜಲಾಶಯದ ಒಳಹರಿವು ಸುಮಾರು 36,000 ಕ್ಯೂಸೆಕ್ (ಪ್ರತಿ ಸೆಕೆಂಡಿಗೆ ಘನ ಅಡಿ) ಇದ್ದು, ತುಂಗಾ ಜಲಾಶಯ (32,000 ಕ್ಯೂಸೆಕ್ ಬಿಡುಗಡೆ), ಭದ್ರಾ ಅಣೆಕಟ್ಟು (11,000 ಕ್ಯೂಸೆಕ್), ವರದಾ ನದಿಯ (9,700 ಕ್ಯೂಸೆಕ್) ಒಳಹರಿವು ಮತ್ತು ಜಲಾಶಯದ ಜಲಾನಯನ ಪ್ರದೇಶದಲ್ಲಿ (53,000 ಕ್ಯೂಸೆಕ್) ಮಳೆಯಾಗುತ್ತಿರುವ ಪರಿಣಾಮ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಮಧ್ಯಾಹ್ನದಿಂದ ನದಿಗೆ ನೀರನ್ನು ಬಿಡುಗಡೆ ಮಾಡಲಾಗುವುದು, ಒಳಹರಿವಿನ ಆಧಾರದ ಮೇಲೆ ಹೊರಹರಿವು 40,000 ರಿಂದ 70,000 ಕ್ಯೂಸೆಕ್‌ಗಳ ನಡುವೆ ಬದಲಾಗುವ ನಿರೀಕ್ಷೆಯಿದೆ.
ಈ ನಡುವೆ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶುಕ್ರವಾರ ಭಾರೀ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮಳೆಯಿಂದಾಗ ಅಡಚಣೆಗಳು ಎದುರಾಗುವ ಸಾಧ್ಯತೆಗಳಿದ್ದು, ಜನರು ಸಾಧ್ಯವಾದಷ್ಟು ಮನೆಗಳಲ್ಲಿಯೇ ಇರಲು, ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿರುವಂತೆ ಹಾಗೂ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ, ವಿದ್ಯುತ್ ಉಪಕರಣಗಳನ್ನು ಅನ್‌ಪ್ಲಗ್ ಮಾಡಲು, ಮರಗಳು ಅಥವಾ ಜಲಮೂಲಗಳಿಂದ ಸುರಕ್ಷಿತ ಪ್ರದೇಶಗಳಲ್ಲಿರುವಂತೆ ಎಚ್ಚರಿಕೆ ನೀಡಿದೆ.
ಅಲ್ಲದೆ, ತಗ್ಗು ಪ್ರದೇಶಗಳು, ಕೆರೆ, ಸಮುದ್ರ ತೀರಗಳು ಮತ್ತು ನದಿ ತೀರಗಳಿಂದ ಮಕ್ಕಳು ದೂರವಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಪೋಷಕರಿಗೆ ಸಲಹೆ ನೀಡಿದೆ. ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.
ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಪ್ರಧಾನ ಕಚೇರಿಯಲ್ಲಿಯೇ ಇದ್ದು ಸಾರ್ವಜನಿಕ ದೂರುಗಳಿಗೆ ಸ್ಪಂದಿಸಲು ಸೂಚಿಸಲಾಗಿದೆ, ತಹಶೀಲ್ದಾರರು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಳ್ಳಲು ನಿರ್ದೇಶಿಸಲಾಗಿದೆ.
ಆಗಸ್ಟ್ 28 ರಂದು ಬೆಳಿಗ್ಗೆ 8.30 ರಿಂದ ಆಗಸ್ಟ್ 29 ರಂದು ಬೆಳಿಗ್ಗೆ 5.30 ರವರೆಗೆ ದಾಖಲಾಗಿರುವ ಮಳೆಯಲ್ಲಿ ಮಂಗಳೂರುನಲ್ಲಿ 136.9 ಮಿ.ಮೀ, ಗದಗದಲ್ಲಿ 10.0 ಮಿ.ಮೀ, ಬೆಂಗಳೂರು ಎಚ್‌ಎಎಲ್'ನಲ್ಲಿ 13.7 ಮಿ.ಮೀ, ಚಿತ್ರದುರ್ಗದಲ್ಲಿ 17.0 ಮಿ.ಮೀ, ಕಲಬುರಗಿಯಲ್ಲಿ 14.6 ಮಿ.ಮೀ ಮತ್ತು ಬೆಂಗಳೂರು ನಗರದಲ್ಲಿ 16.1 ಮಿ.ಮೀ. ಮಳೆಯಾಗಿದೆ.
ಇತರೆಡ ಅಂದರೆ ಆಗುಂಬೆಯಲ್ಲಿ 108.5 ಮಿ.ಮೀ, ವಿಜಯಪುರದ ತಿಡಗುಂಡಿಯಲ್ಲಿ 96.5 ಮಿ.ಮೀ ಮತ್ತು ಮಂಗಳೂರಿನಲ್ಲಿ 63.0 ಮಿ.ಮೀ ಮಳೆಯಾಗಿದೆ.
ಆಗಸ್ಟ್ 28 ರಂದು ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ ಹೊನ್ನಾವರದಲ್ಲಿ 8.0 ಮಿ.ಮೀ ಮಳೆಯಾಗಿದ್ದರೆ, ಕಾರವಾರದಲ್ಲಿ 1.3 ಮಿ.ಮೀ, ಬೀದರ್‌ನಲ್ಲಿ 14.4 ಮಿ.ಮೀ ಮತ್ತು ಶಕ್ತಿನಗರದಲ್ಲಿ 56.2 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Advertisement