
ಬೆಂಗಳೂರು: ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಎಂ ಸಲೀಂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ಮೇ 21ರಂದು ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಡಾ.ಎಂ.ಎ ಸಲೀಂ ಅವರನ್ನು ಪ್ರಭಾರ ಡಿಜಿಪಿಯಾಗಿ ನೇಮಿಸಿತ್ತು. ಈ ಆದೇಶ ರದ್ದು ಕೋರಿ ವಕೀಲೆ ಸುಧಾ ಕಾಟ್ವಾ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ಉಮಾಪತಿ ಅವರು ವಾದ ಮಂಡಿಸಿದ್ದರು.
ವಿಚಾರಣೆ ವೇಳೆ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಕೇಂದ್ರ ಲೋಕಸೇವಾ ಆಯೋಗದ ಉನ್ನತ ಮಟ್ಟದ ಸಮಿತಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ನೇಮಕ ಮಾಡುವ ಸಂಬಂಧ ನಿರ್ದಿಷ್ಟ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಪೊಲೀಸ್ ಮಹಾ ನಿರ್ದೇಶಕರನ್ನಾಗಿ ಒಂದು ವಾರದಲ್ಲಿ ನೇಮಕ ಮಾಡಿ ಆದೇಶಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಇದೀಗ ಹಿರಿಯ ಐಪಿಎಸ್ ಅಧಿಕಾರಿ ಎಂ ಸಲೀಂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
1993 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಡಾ. ಸಲೀಂ ಅವರು ಅಲೋಕ್ ಮೋಹನ್ ನಿವೃತ್ತರಾದ ನಂತರ ಡಿಜಿಪಿ ಆಗಿ ಅಧಿಕಾರ ವಹಿಸಿಕೊಂಡರು.
ಡಾ. ಸಲೀಂ ಪ್ರಸ್ತುತ ಸಿಐಡಿಯ ಡಿಜಿಪಿ ಆಗಿದ್ದಾರೆ. ಇದರ ಜೊತೆಗೆ ರಾಜ್ಯದ ಡಿಜಿಪಿ ಮತ್ತು ಐಜಿಪಿಯ ಹೆಚ್ಚುವರಿ ಜವಾಬ್ದಾರಿಯನ್ನು ಸಹ ಹೊಂದಿದ್ದಾರೆ.
Advertisement