ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಪ್ರಜೆಗಳ ಬಂಧನ; 29 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ
ಬೆಂಗಳೂರು: ಬೆಂಗಳೂರು ಪೊಲೀಸರು ಬುಧವಾರ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದು, ಅವರಿಂದ 10 ಕೆಜಿಗೂ ಹೆಚ್ಚು ಎಂಡಿಎಂಎ ಕ್ರಿಸ್ಟಲ್ ಮತ್ತು ಎಂಟು ಕೆಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದರ ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು 28.75 ಕೋಟಿ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ನಗರ ಕೇಂದ್ರ ಅಪರಾಧ ಶಾಖೆ(ಸಿಸಿಬಿ)ಯ ಮಾದಕ ದ್ರವ್ಯ ವಿರೋಧಿ ವಿಭಾಗವು, ಡ್ರಗ್ಸ್ ಮಾರಾಟಗಾರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿ ಈ ಬಂಧನಗಳನ್ನು ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಂಧಿತ ವಿದೇಶಿ ಪ್ರಜೆಗಳ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಸಂಪಿಗೆಹಳ್ಳಿಯಲ್ಲಿ ವಾಸಿಸುವ ವಿದೇಶಿ ಮಹಿಳೆಯೊಬ್ಬರು ತಮ್ಮ ನಿವಾಸದಲ್ಲಿ ಎಂಡಿಎಂಎ ಸಂಗ್ರಹಿಸಿ ಪರಿಚಿತ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ದಾಳಿಯ ಸಂದರ್ಭದಲ್ಲಿ, ಮಹಿಳೆಯನ್ನು ಬಂಧಿಸಲಾಗಿದೆ ಮತ್ತು ಆಕೆಯಿಂದ ಸುಮಾರು 18.50 ಕೋಟಿ ರೂ. ಮೌಲ್ಯದ 9 ಕೆಜಿ 254 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಜೊತೆಗೆ ಒಂದು ಮೊಬೈಲ್ ಫೋನ್ ಹಾಗೂ ಅಪರಾಧಕ್ಕೆ ಬಳಸಿದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಕಾರ್ಯಾಚರಣೆಯಲ್ಲಿ, ಲಾಲ್‌ಬಾಗ್ ಸೌತ್ ಗೇಟ್ ಬಳಿಯ ಬ್ಯಾಸ್ಕೆಟ್‌ಬಾಲ್ ಕೋರ್ಟ್ ಬಳಿ ಆಗಾಗ್ಗೆ ಓಡಾಡುವ ಮತ್ತು ಡ್ರಗ್ಸ್ ಮಾರಾಟದಲ್ಲಿ ಭಾಗಿಯಾಗಿರುವ ವಿದೇಶಿ ಪ್ರಜೆಯ ಬಗ್ಗೆ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿ ನಡೆಸಿ ಶಂಕಿತನನ್ನು ಬಂಧಿಸಲಾಗಿದ್ದು, ಸುಮಾರು 2.25 ಕೋಟಿ ರೂ. ಮೌಲ್ಯದ 1 ಕೆಜಿ 115 ಗ್ರಾಂ ಎಂಡಿಎಂಎ ಸ್ಫಟಿಕ ಮತ್ತು ಅಪರಾಧಕ್ಕೆ ಬಳಸಲಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದಲ್ಲದೆ, ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಯಲ್ಲಿ ಪಾರ್ಸೆಲ್‌ಗಳಲ್ಲಿ ಕಂಡುಬಂದ ನಿಷೇಧಿತ ಮಾದಕ ವಸ್ತುಗಳ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 8 ಕೋಟಿ ರೂ. ಮೌಲ್ಯದ ಎಂಟು ಕೆಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.


