

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅಭಿಮಾನಿಗಳತ್ತ ತಮ್ಮ ಮಧ್ಯದ ಬೆರಳು ತೋರಿಸಿ ಉದ್ಧಟತನ ಮೆರೆದಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಖಾಸಗಿ ಕಾರ್ಯಕ್ರಮದ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಆರ್ಯನ್ ಖಾನ್ ಬಂದಿದ್ದು ಎಷ್ಟು ಸುದ್ದಿಯಾಯಿತೋ ಅಂತೆಯೇ ಅವರ ವರ್ತನೆ ಕೂಡ ಅದಕ್ಕಿಂತಲೂ ಹೆಚ್ಚು ಸುದ್ದಿಗೆ ಗ್ರಾಸವಾಗುತ್ತಿದೆ. ಬೆಂಗಳೂರಿನ ಪಬ್ ವೊಂದಕ್ಕೆ ಬಂದಿದ್ದ ಆರ್ಯನ್ ಖಾನ್ ತಮ್ಮನ್ನು ನೋಡಲು ಬಂದಿದ್ದ ಅಭಿಮಾನಿಗಳತ್ತ ಮಧ್ಯದ ಬೆರಳು ತೋರಿಸಿ ಅಗೌರವ ತೋರಿದ್ದಾರೆ ಎನ್ನಲಾಗಿದೆ.
ಪಬ್ನಲ್ಲಿ ಆರ್ಯನ್ ಖಾನ್ ಅವರನ್ನು ನೋಡಲು ಅಭಿಮಾನಿಗಳು ಸೇರಿದ್ದರು. ಆಗ ಆರ್ಯನ್ ಖಾನ್ ಅಭಿಮಾನಿಗಳತ್ತ ಕೈ ಬೀಸುತ್ತಿದ್ದಾಗಲೇ ಸಾರ್ವಜನಿಕವಾಗಿ ಮಧ್ಯದ ಬೆರಳು ತೋರಿಸಿದ್ದಾರೆ. ಬಳಿಕ ಪಕ್ಕದಲ್ಲಿಯೇ ಇದ್ದ ನಲಪಾಡ್ ಅವರು ಆರ್ಯನ್ ಗೆ ಏನೋ ಹೇಳಿದ್ದು ಈ ವೇಳೆ ಆರ್ಯನ್ ಕೈ ಬೀಸುತ್ತಾ ಒಳಗೆ ಹೋಗಿದ್ದಾರೆ.
ನಲಪಾಡ್, ಝೈದ್ ಖಾನ್ ಸಾಥ್
ಇನ್ನು ಬೆಂಗಳೂರಿಗೆ ಬಂದಿದ್ದ ಆರ್ಯನ್ ಖಾನ್ ಗೆ ವಕ್ಫ್ ಸಚಿವ B.Z. ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್, ಬಿಡಿಎ ಅಧ್ಯಕ್ಷ N.A. ಹ್ಯಾರಿಸ್ ಪುತ್ರ ನಲಪಾಡ್ ಕೂಡ ಇದ್ದರು. ಮೊಹಮ್ಮದ್ ನಲಪಾಡ್ ಜೊತೆ ಆರ್ಯನ್ ಖಾನ್ ಅವರು ಪಬ್ಗೆ ಬಂದಿದ್ದರು. ಆರ್ಯನ್ ಖಾನ್ ಅವರು ಮಧ್ಯದ ಬೆರಳು ತೋರಿಸಿದ ವೇಳೆ ಝೈದ್ ಖಾನ್ ಮತ್ತು ಮೊಹಮ್ಮದ್ ನಲಪಾಡ್ ಅವರು ನಗುತ್ತಾ ಪ್ರತಿಕ್ರಿಯಿಸಿದ್ದರು.
ಏನಿದು ಘಟನೆ?
ಬೆಂಗಳೂರಿನ ಅಶೋಕನಗರ ಠಾಣಾ ವ್ಯಾಪ್ತಿಯ ಪಬ್ನಲ್ಲಿ ಈ ಘಟನೆ ನಡೆದಿದೆ. ನವೆಂಬರ್ 28ರಂದು ಆರ್ಯನ್ ಖಾನ್ ಅವರು ಬೆಂಗಳೂರಿಗೆ ಬಂದಿದ್ದರು. ಆಗ ಅವರು ದುರ್ವರ್ತನೆ ತೋರಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಪಬ್‌ನ ಬಾಲ್ಕನಿಯಲ್ಲಿ ನಿಂತು ಜನರತ್ತ ಮಧ್ಯದ ಬೆರಳು ತೋರಿಸಿದ ಆರ್ಯನ್ ಅವರ ವರ್ತನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಖಂಡಿಸಲಾಗುತ್ತಿದೆ.
ವ್ಯಾಪಕ ಆಕ್ರೋಶ
ಇನ್ನು ಆರ್ಯನ್ ಖಾನ್ ರ ಈ ವರ್ತನೆಯ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ನೋಡಿದ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಆರ್ಯನ್ ಖಾನ್ ಅವರ ಮೇಲೆ ಬೆಂಗಳೂರು ಪೊಲೀಸರು (Bengaluru Police) ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.
Advertisement