

ಬೆಂಗಳೂರು: ಡಿಸೆಂಬರ್ 5 ರಂದು ರಾತ್ರಿ 11:59 ರವರೆಗೆ ಬೆಂಗಳೂರಿನಿಂದ ಮುಂಬೈ ಮತ್ತು ದೆಹಲಿಗೆ ತೆರಳಬೇಕಿದ್ದ ಇಂಡಿಗೋ ವಿಮಾನಗಳು ರದ್ದಾಗಿವೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುವ ಬಿಐಎಎಲ್ ಶುಕ್ರವಾರ ಪ್ರಯಾಣಿಕರಿಗೆ ತಿಳಿಸಿದೆ.
ಸಾಲು ಸಾಲು ವಿಮಾನ ರದ್ದತಿಯಿಂದಾಗಿ ನೂರಾರು ಪ್ರಯಾಣಿಕರು ತೀವ್ರ ಸಂಕಷ್ಚಕ್ಕೆ ಸಿಲುಕಿಕೊಂಡಿದ್ದಾರೆ.
ಪಾಟ್ನಾದಲ್ಲಿ ತನ್ನ ಸಹೋದರನ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಬೇಕಿದ್ದ ಮಗುವನ್ನು ಹೊತ್ತ ಮಹಿಳೆ, ಹರಿದ್ವಾರದಲ್ಲಿ ತನ್ನ ತಂದೆಯ ಅಸ್ಥಿ ವಿಸರ್ಜಿಸಲು ಕೈಯಲ್ಲಿ ಚಿತಾಭಸ್ಮ ಹಿಡಿದು ಕಾಯುತ್ತಿರುವ ಮತ್ತೊಬ್ಬ ಪ್ರಯಾಣಿಕ, ಶಬರಿಮಲೆಗೆ ಹೋಗಬೇಕಾಗಿರುವ ಅಯ್ಯಪ್ಪ ಭಕ್ತರು ಸೇರಿದಂತೆ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಪ್ರಯಾಣಿಕರ ಸಲಹೆಯಲ್ಲಿ, ಇತರ ಸ್ಥಳಗಳಿಗೆ ಕಾರ್ಯನಿರ್ವಹಿಸುವ ಇಂಡಿಗೋ ವಿಮಾನಗಳಿಗಾಗಿ, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ವಿಮಾನಯಾನ ಸಂಸ್ಥೆಯೊಂದಿಗೆ ನೇರವಾಗಿ ಮಾತನಾಡಿ, ವಿಮಾನ ಸ್ಥಿತಿಯನ್ನು ತಿಳಿದುಕೊಳ್ಳಬೇಕೆಂದು ಸಲಹೆ ನೀಡಿದೆ.
ಸಿಬ್ಬಂದಿಗಳ ಕೊರತೆಯಿಂದಾಗಿ ಇಂಡಿಗೋ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಬುಧವಾರದಿಂದಲೂ ಪ್ರಯಾಣಿಕರು ಸಂಕಷ್ಟ ಎದಿರುಸುತ್ತಿದ್ದಾರೆ. ಇಂದು ಡಿ.5ರಂದು 400ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಮೂರು ದಿನಗಳಿಂದ ಸಿಲುಕಿಕೊಂಡಿದ್ದಾರೆ.
Advertisement