

ಬೆಂಗಳೂರು: ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ಕಾರ್ಯವನ್ನು ಗಡುವಿನೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಆ ಸಂಸ್ಥೆಗಳನ್ನು ಬ್ಲ್ಯಾಕ್ ಲಿಸ್ಟ್'ಗೆ ಸೇರಿಸಿ ಮುಂದಿನ ಸರ್ಕಾರಿ ಯೋಜನೆಗಳಿಗೆ ಪರಿಗಣಿಸಲಾಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.
ಕೊಡಿಗೆಹಳ್ಳಿಯಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ ಕಾಮಗಾರಿ ಪ್ರಗತಿ ಪರಿಶೀಲಿಸಿ ಉಪ ಮುಖ್ಯಮಂತ್ರಿಗಳು ಮಾತನಾಡಿದರು.
ಕೆ.ಆರ್. ಪುರಂ ನಿಂದ ಸಿಲ್ಕ್ ಬೋರ್ಡ್ ವಿಭಾಗವನ್ನು ಡಿಸೆಂಬರ್ 2026 ರೊಳಗೆ ಪೂರ್ಣಗೊಳಿಸಲು ಸರ್ಕಾರ ಗುರಿ ಹೊಂದಿದೆ. ಕೆ.ಆರ್. ಪುರಂ ನಿಂದ ಹೆಬ್ಬಾಳ ಮಾರ್ಗವನ್ನು ಡಿಸೆಂಬರ್ 2027 ರೊಳಗೆ ಮತ್ತು ಹೆಬ್ಬಾಳದಿಂದ ವಿಮಾನ ನಿಲ್ದಾಣ ವಿಭಾಗವನ್ನು ಜೂನ್ 2027 ರೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರು ಬದ್ಧರಾಗಿದ್ದಾರೆ. ಈ ಮಾರ್ಗದಲ್ಲಿ 5-10 ನಿಲ್ದಾಣಗಳು ಪೂರ್ಣಗೊಂಡ ನಂತರ ಸೀಮಿತ ರೈಲು ಕಾರ್ಯಾಚರಣೆಗಳನ್ನು ಪ್ರಾರಂಭಿಸುವ ಸಾಧ್ಯತೆಯನ್ನು ಸರ್ಕಾರ ಅನ್ವೇಷಿಸುತ್ತಿದೆ ಎಂದು ಹೇಳಿದರು.
ಟೀಕೆ ಏನೇ ಇರಲಿ, ಕೆಲಸ ಮುಂದುವರಿಯಬೇಕು. ಅಪಘಾತ ಘಟನೆಯ ನಂತರ, ಕಟ್ಟುನಿಟ್ಟಾದ ಸಂಚಾರ ಮೇಲ್ವಿಚಾರಣೆಯೊಂದಿಗೆ ರಾತ್ರಿಯಲ್ಲಿ ಮಾತ್ರ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಮೆಟ್ರೋ ರೈಲು ಮಾರ್ಗ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲೇಬೇಕು.
ಎನ್‌ಸಿಸಿ ಅಥವಾ ಬೇರೆ ಯಾವುದೇ ಗುತ್ತಿಗೆದಾರರಾದರೂ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ, ಮುಂದೆ ಯಾವುದೇ ಕಾಮಗಾರಿಯನ್ನೂ ಅವರಿಗೆ ನೀಡುವುದಿಲ್ಲ, ನಮಗೆ ಯೋಜನೆ ಜಾರಿ ಮುಖ್ಯ. ಉಳಿದ ಇಬ್ಬರು ಗುತ್ತಿಗೆದಾರರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಎನ್‌ಸಿಸಿ ಬಗ್ಗೆ ಕೆಲ ದೂರು ಗಳಿವೆ. ಅದನ್ನು ಸರಿಪಡಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇದೇ ವೇಳೆ ಕೆಲಸ ಪೂರ್ಣಗೊಳ್ಳುವವರೆಗೆ ಸ್ಥಳದಲ್ಲಿ ನಿಯೋಜಿಸಲಾದ ಪ್ರಮುಖ ಯಂತ್ರೋಪಕರಣಗಳನ್ನು ಬೆಂಗಳೂರಿನಿಂದ ಹೊರಗೆ ಸ್ಥಳಾಂತರಿಸಬಾರದು ಎಂದು ಸೂಚನೆ ನೀಡಿದರು.
ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು GBA ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ವಹಿಸಲಾಗಿದೆ ಎಂದು ಹೇಳಿದರು.
ಬಳಿಕ ಬೆಂಗಳೂರು ವ್ಯಾಪಾರ ಕಾರಿಡಾರ್ (ಬಿಬಿಸಿ) ಯೋಜನೆಯ ಪ್ರಗತಿಯನ್ನು ಡಿಸಿಎಂ ಪರಿಶೀಲಿಸಿದರು,
ಸರ್ಕಾರದ ಪ್ಯಾಕೇಜ್ ಅನ್ನು ನಿರಾಕರಿಸುವ ಭೂಮಾಲೀಕರಿಗೆ ನ್ಯಾಯಾಲಯದಲ್ಲಿ ಹಳೆಯ ದರದಲ್ಲಿ ಪರಿಹಾರವನ್ನು ಠೇವಣಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಟಿಡಿಆರ್, ಎಫ್‌ಎಆರ್ ಮತ್ತು ಯೋಜನೆಯ ಉದ್ದಕ್ಕೂ ಶೇ.35 ವಾಣಿಜ್ಯ ಭೂಮಿಯ ನಿಬಂಧನೆ ಸೇರಿದಂತೆ ರೈತರಿಗೆ ಐದು ಪರಿಹಾರ ಆಯ್ಕೆಗಳನ್ನು ನೀಡಲಾಗುತ್ತಿದೆ. ದೇಶದ ಬೇರೆ ಯಾವುದೇ ರಾಜ್ಯವು ಇಷ್ಟೊಂದು ಆಯ್ಕೆಗಳನ್ನು ನೀಡುವುದಿಲ್ಲ. ಯಾರು ಏನೇ ಹೇಳಿದರೂ, ನಾನು ಭೂಮಿಯನ್ನು ಡಿನೋಟಿಫೈ ಮಾಡುವುದಿಲ್ಲ ಎಂದು ಹೇಳಿದರು.
Advertisement