

ಬೆಂಗಳೂರು: ನಾನು ಯಾರಿಂದಲೂ ಒಂದು ಪೈಸೆ ಲಂಚ ಪಡೆದಿಲ್ಲ. ನಾನು ಲಂಚ ಪಡೆದಿರುವುದು ಸಾಬೀತುಪಡಿಸಿದರೆ ಆ ಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಶುಕ್ರವಾರ ಹೇಳಿದರು.
ಬೆಂಗಳೂರು ಸಂಚಾರ ಪೊಲೀಸರಿಗಾಗಿ ಮೂರು 'ಹೈಜೀನ್ ಆನ್ ಗೋ' ಮೊಬೈಲ್ ನೈರ್ಮಲ್ಯ ವಾಹನಗಳಿಗೆ ಚಾಲನೆ ನೀಡಿದ ನಂತರ ಅವರು ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ಲಂಚ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ 124 ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. 7.11 ಕೋಟಿ ದರೋಡೆ ಕೇಸ್ ನಲ್ಲಿ ಓರ್ವ ಪಿಸಿ ಭಾಗಿಯಾಗಿದ್ದ. ಆತನನ್ನು ಕೆಲಸದಿಂದ ವಜಾಗೊಳಿಸುತ್ತೇವೆಂದು ಹೇಳಿದರು.
ದಾವಣಗೆರೆಯಲ್ಲಿ ಚಿನ್ನಭಾರಣ ವ್ಯಾಪಾರಿ ದರೋಡೆ ಪ್ರಕರಣದಲ್ಲಿ ಓರ್ವ ಪ್ರೊಬೆಷನರಿ ಪಿಎಸ್ ಐ ವಜಾಗೊಳಿಸಿದ್ದೇವೆ. ಮತ್ತೊಬ್ಬ ಪಿಎಸ್ ಐ ಅಮಾನತು ಮಾಡಿದ್ದೇವೆ. ಕೋಲಾರದ ಪೊಲೀಸ್ ಸಿಬ್ಬಂದಿಯನ್ನು ವಜಾ ಮಾಡುತ್ತೇವೆ. ಅವರು ಕೋರ್ಟ್ ಗೆ ಹೋದರೆ ನಾವು ಕೂಡ ಹೋಗುತ್ತೇವೆ ಎಂದು ತಿಳಿಸಿದರು.
ನಾನು ಗೃಹಸಚಿವನಾದ ಮೇಲೆ ಯಾರಿಂದಲೂ ಹಣ ಪಡೆದಿಲ್ಲ ಹಣ ಪಡೆದು ಯಾವುದೇ ಪೋಲಿಸರಿಗೆ ಪೋಸ್ಟಿಂಗ್ ಮಾಡಿಲ್ಲ. ಲಂಚ ಪಡೆದಿದ್ದು ಸಾಬೀತು ಪಡಿಸಿದರೆ ಗೃಹ ಸಚಿವ ಸ್ಥಾನದಲ್ಲಿರಲ್ಲ. ಯಾರೊ ಒಬ್ಬ ನನ್ನ ಪರಿಚಯವಿದೆ ಎಂದು ಲಂಚ ಪಡೆದರೇ ಆತನ ವಿರುದ್ದವೂ ಕ್ರಮ ಕೈಗೊಳ್ಳುತ್ತೇವೆ.
ಮೊನ್ನೆ ಕಮಿಷನರ್ ಕಚೇರಿಯಲ್ಲಿ ಓರ್ವ ಪಿಸಿ ಹಣ ಪಡೆದಿದ್ದ. ಆತನ ವಿರುದ್ದವೂ ಕ್ರಮ ಕೈಗೊಳ್ಳುತ್ತೇವೆ. ಬೆಳಗಾವಿ ಲಾಠಿ ಚಾರ್ಜ್ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಭ್ರಷ್ಟ ಕೃತ್ಯಗಳಲ್ಲಿ ಭಾಗಿಯಾಗುವ ಪೊಲೀಸರು ಸೇವೆಯಿಂದಲೇ ವಜಾ
ಇದೇ ವೇಳೆ ಭ್ರಷ್ಟ ಕೃತ್ಯಗಳಲ್ಲಿ ಭಾಗಿಯಾಗಿರುವ ಪೊಲೀಸರನ್ನು ಅಮಾನತುಗೊಳಿಸುವುದಲ್ಲದೆ, ಆರೋಪ ಸಾಬೀತಾದರೆ ಸೇವೆಯಿಂದಲೇ ವಜಾಗೊಳಿಸಲಾಗುವುದು ಎಂದು ಗೃಹ ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರ ಕೃತ್ಯಗಳನ್ನು ನಿಲ್ಲಿಸಲು ಇರುವ ಒಂದೇ ಮಾರ್ಗವೆಂದರೆ ಅಮಾನತು ಅಥವಾ ವಜಾಗೊಳಿಸುವುದು. ಇತ್ತೀಚೆಗೆ ನಡೆದ 7.11 ಕೋಟಿ ರೂ. ದರೋಡೆಯಲ್ಲಿ ಭಾಗಿಯಾಗಿರುವ ಪೊಲೀಸ್ ಕಾನ್‌ಸ್ಟೆಬಲ್ ಅನ್ನು ಸೇವೆಯಿಂದ ವಜಾಗೊಳಿಸಲಾಗುವುದು. ವಜಾಗೊಳಿಸಲಾದ ಯಾವುದೇ ಪೊಲೀಸ್ ವಜಾಗೊಳಿಸುವಿಕೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದರೆ, ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೋಗಿ ಅಂತಹ ಪೊಲೀಸರಿಗೆ ಮತ್ತೆ ಎಂದಿಗೂ ಕೆಲಸ ಸಿಗದಂತೆ ನೋಡಿಕೊಳ್ಳುತ್ತದೆ. ಭ್ರಷ್ಟ ಪೊಲೀಸರಿಗೆ ಯಾವುದೇ ಕರುಣೆ ಇಲ್ಲ. ಅಂತಹ ಘಟನೆಗಳು ಬೆಳಕಿಗೆ ಬಂದಾಗಲೆಲ್ಲಾ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬಳಿಕ ಸೈಬರ್ ಅಪರಾಧಗಳ ಕುರಿತು ಮಾತನಾಡಿದ ಅವರು, ಈ ವರ್ಷದ ಆರಂಭದಿಂದ ಸುಮಾರು 13,000 ಪ್ರಕರಣಗಳು ದಾಖಲಾಗಿವೆ. 2024 ರಲ್ಲಿ, ಸುಮಾರು 21,995 ಮತ್ತು 2023 ರಲ್ಲಿ, ಸುಮಾರು 21,903 ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಿದರು.
ಮಾದಕ ದ್ರವ್ಯ ಪಿಡುಗಿನ ವಿರುದ್ಧದ ಹೋರಾಟದ ಕುರಿತು ಮಾತನಾಡಿ, "ಬೆಂಗಳೂರು ನಗರ ಪೊಲೀಸರು ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳಸಾಗಣೆ ವಿರುದ್ಧದ ಹೋರಾಟದಲ್ಲಿ ಒಂದು ಮೈಲಿಗಲ್ಲು ಸಾಧಿಸಿದ್ದಾರೆ. 2025 ರಲ್ಲಿ, ಅವರು 1,078 NDPS ಪ್ರಕರಣಗಳನ್ನು ದಾಖಲಿಸಿದ್ದಾರೆ 1,491 ಭಾರತೀಯ ಪ್ರಜೆಗಳು ಮತ್ತು 52 ವಿದೇಶಿಯರನ್ನು ಬಂಧಿಸಿದ್ದಾರೆ.
ಸುಮಾರು 120.14 ಕೋಟಿ ರೂ. ಮೌಲ್ಯದ 1,446.75 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ, ರಾಜ್ಯದಲ್ಲಿ 15,678 NDPS ಪ್ರಕರಣಗಳು ದಾಖಲಾಗಿವೆ. 19,197 ಭಾರತೀಯ ಪ್ರಜೆಗಳು ಮತ್ತು 211 ವಿದೇಶಿಯರನ್ನು ಬಂಧಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಡೆದ ಕೊಲೆ ಪ್ರಕರಣಗಳ ಕುರಿತ ಮಾತನಾಡಿ,, 2025 ರಲ್ಲಿ 1,132 ಪ್ರಕರಣಗಳು, 2024 ರಲ್ಲಿ 1,202 ಮತ್ತು 2023 ರಲ್ಲಿ 1,289 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.
ಬೆಂಗಳೂರು ಕೇಂದ್ರ ಕಾರಾಗೃಹದ ಪರಪ್ಪನ ಅಗ್ರಹಾರದ ವೈರಲ್ ವಿಡಿಯೋ ಕುರಿತು ಮಾತನಾಡಿ, ಆ ವೀಡಿಯೊಗಳಲ್ಲಿ ಕೆಲವು ಮೂರರಿಂದ ನಾಲ್ಕು ವರ್ಷ ಹಳೆಯವು ಎಂದರು. ಅಲ್ಲದೆ, ವೀಡಿಯೊ ಯಾವಾಗಿನದು ಎಂಬುದನ್ನು ಲೆಕ್ಕಿಸದೆ, ತಪ್ಪಿತಸ್ಥ ಜೈಲು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಮಹಿಳೆಯರು, ಸಾರ್ವಜನಿಕರಿಂದ ಬಂದ ದೂರುಗಳಿಗೆ ಸ್ಪಂದಿಸುವಿಕೆ, ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳುವುದು ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಹಲವಾರು ಮಾನದಂಡಗಳ ಆಧಾರದ ಮೇಲೆ ದೇಶದ ಮೂರನೇ ಅತ್ಯುತ್ತಮ ಪೊಲೀಸ್ ಠಾಣೆಯಾಗಿ ಆಯ್ಕೆಯಾದ ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆಯ ಪೊಲೀಸರಿಗೆ 2.5 ಲಕ್ಷ ರೂ. ನಗದು ಬಹುಮಾನವನ್ನು ಸಚಿವರು ಘೋಷಿಸಿದರು.
ಬಳಿಕ 'ಹೈಜೀನ್ ಆನ್ ಗೋ' ಮೊಬೈಲ್ ನೈರ್ಮಲ್ಯ ವಾಹನಗಳ ಕುರಿತು ಮಾತನಾಡಿದ ಅವರು, 'ಹೈಜೀನ್ ಆನ್ ಗೋ' ಮೊಬೈಲ್ ನೈರ್ಮಲ್ಯ ವಾಹನಗಳು ರೆನಾಲ್ಟ್ ನಿಸ್ಸಾನ್ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (RNTBCI) ಯ ಸಿಎಸ್ಆರ್ ಉಪಕ್ರಮವಾಗಿದ್ದು, ಇದನ್ನು ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ (ಸಾರ್ವಜನಿಕ ಚಾರಿಟಬಲ್ ಟ್ರಸ್ಟ್) ಜಾರಿಗೊಳಿಸಿದೆ.
ಇಂತಹ ಸಹಾಯವು ಪೊಲೀಸರನ್ನು ಹೆಚ್ಚು ಕೆಲಸ ಮಾಡಲು ಪ್ರೇರೇಪಿಸುತ್ತದೆ. ಯಾವುದೇ ಸೌಲಭ್ಯಗಳಿಲ್ಲದಿದ್ದರೂ, ಪೊಲೀಸರು ನಮ್ಮನ್ನು ರಕ್ಷಿಸಲು ಕೆಲಸ ಮಾಡುತ್ತಾರೆ. ಇದು ಅತ್ಯುತ್ತಮ ಉಪಕ್ರಮ. ಬೀದಿಗಳಲ್ಲಿ ಪೊಲೀಸರನ್ನು ನಿಯೋಜಿಸಿದಾಗಲೆಲ್ಲಾ ಅವರು ಹೇಗೆ ಸಂಕಷ್ಟ ಪಡುತ್ತಾರೆಂಬುದನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ಇಂತಹ ಹೆಚ್ಚಿನ ಉಪಕ್ರಮಗಳನ್ನು ಮಾಡಬೇಕೆಂದು ನಾನು ಬಯಸುತ್ತೇನೆಂದು ಹೇಳಿದರು.
Advertisement