

ಬೆಳಗಾವಿ: ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲೇ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್ ) ಕ್ಯಾತೆ ತೆಗೆಯುವುದು ಸಾಮಾನ್ಯವಾಗಿದೆ. ಈ ವರ್ಷವೂ ಎಂಇಎಸ್ ಮಹಾಮೇಳಾವ್ ನಡೆಸಲು ಮುಂದಾಗಿದ್ದು, ಮತ್ತೆ ಕ್ಯಾತೆ ತೆಗೆಯುತ್ತಿದೆ.
1956ರ ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲೇ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಕಾನೂನಾತ್ಮಕವಾಗಿ ದೃಢಪಟ್ಟಿದೆ. ಆದರೂ, ಮಹಾರಾಷ್ಟ್ರ ಸರ್ಕಾರ ಮತ್ತು ಬೆಳಗಾವಿಯ ಸ್ಥಳೀಯ ಪುಂಡ ಸಂಘಟನೆಯಾದ ಎಂಇಎಸ್, ಭಾಷೆಯ ಹೆಸರಿನಲ್ಲಿ ಶಾಂತಿ ಕದಡುವ ಕೆಲಸವನ್ನು ದಶಕಗಳಿಂದ ಮಾಡುತ್ತಲೇ ಬಂದಿವೆ. ಮಹಾಮೇಳಾವ್ ನಡೆಸುವ ಮೂಲಕ ಭಾಷಾ ಸಾಮರಸ್ಯ ಕದಡುವ ಪ್ರಯತ್ನ ನಡೆಸುತ್ತಿದೆ.
ಇದೀಗ ಮತ್ತೆ ವಿಧಾನಮಂಡಲ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾ ಮೇಳವ' ಸಮಾವೇಶಕ್ಕೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದೆ. ಸಭೆಗೆ ನಾಲ್ಕು ಸಂಭಾವ್ಯ ಸ್ಥಳಗಳನ್ನು ಪ್ರಸ್ತಾಪಿಸಿರುವ ಎಂಇಎಸ್ ಪಟ್ಟಿಯನ್ನು ಪೊಲೀಸ್ ಆಯುಕ್ತರಿಗೆ ಸಲ್ಲಿಸಿದೆ. ಆದರೆ, ಪೊಲೀಸ್ರು ಮಹಾಮೇಳಾವಕ್ಕೆ ಅನುಮತಿ ನಿರಾಕರಿಸಿದ್ದಾರೆ.
ಕಳೆದ ಬಾರಿಯೂ ಮಹಾಮೇಳಾವಕ್ಕೆ ಅನುಮತಿ ನಿರಾಕರಿಸಿತ್ತು. ಆದರೆ, ಎಂಇಎಸ್ ಪುಂಡರು ಅಲ್ಲಲ್ಲಿ ಜಮಾಯಿಸಿ, ಪೊಲೀಸರ ಧಿಕ್ಕು ತಪ್ಪಿಸಲು ಯತ್ನಿಸಿದ್ದರು. ಬಳಿಕ ಎಂಇಎಸ್ ಮುಖಂಡರನ್ನು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅನುಮತಿ ಇಲ್ಲದಿದ್ದರೂ ಎಂಇಎಸ್ ಪುಂಡರು ಅಲ್ಲಲ್ಲಿ ಗುಂಪು ಸೇರುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಅನುಮತಿ ನಿರಾಕರಣೆ ನಡುವಲ್ಲೂ ಎಂಇಎಸ್ ಕಳೆದ ಕೆಲವು ದಿನಗಳಿಂದ ಬೆಳಗಾವಿ ನಗರ, ಗ್ರಾಮೀಣ ಪ್ರದೇಶಗಳು ಮತ್ತು ಖಾನಾಪುರ ತಾಲ್ಲೂಕಿನಾದ್ಯಂತ ಅಭಿಯಾನ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಅಭಿಯಾನದಲ್ಲಿ ಕರಪತ್ರಗಳನ್ನು ವಿತರಿಸುತ್ತಿರುವ ಎಂಇಎಸ್ ಪುಂಡರು, ಮರಾಠಿ ಮಾತನಾಡುವ ನಿವಾಸಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಒತ್ತಾಯಿಸುತ್ತಿದ್ದಾರೆಂದು ತಿಳಿದುಬಂದಿದೆ.
ಈ ನಡುವ ಶಿವಸೇನೆ, ಮಹಿಳಾ ಅಘಾಡಿ ಮತ್ತು ಯುವ ಸಮಿತಿಯಂತಹ ಸಂಘಟನೆಗಳು ಸಹ ತಮ್ಮ ಸದಸ್ಯರು ಮತ್ತು ಬೆಂಬಲಿಗರಿಗೆ ಸಭೆಯಲ್ಲಿ ಭಾಗವಹಿಸಲು ಸೂಚನೆ ನೀಡಿವೆ ಎಂದು ಮೂಲಗಳು ತಿಳಿಸಿವೆ.
ಲಭ್ಯವಿರುವ ಸೀಮಿತ ಸಮಯವನ್ನು ಗಮನದಲ್ಲಿಟ್ಟುಕೊಂಡು ಎಂಇಎಸ್ ಪುಂಡರು ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ಸಂಪರ್ಕ ಪ್ರಯತ್ನಗಳನ್ನು ನಡೆಸುತ್ತಿದ್ದು, ಸಭೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತಿದೆ.
ಏತನ್ಮಧ್ಯೆ, ಮಹಾ ಮೇಳವನ್ನು ಅನುಮತಿಸಬೇಕು ಮತ್ತು ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಬಾರದು ಎಂಬ ಒತ್ತಾಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉದ್ವಿಗ್ನ ವಾತಾರವಣ ನಿರ್ಮಾಣವಾಗಿದೆ,
ಮಹಾರಾಷ್ಟ್ರ ಸಚಿವರು ಮತ್ತು ನಾಯಕರಿಗೆ ಇಂತಹ ನಿರ್ಬಂಧಗಳು ಮುಂದುವರಿದರೆ, ಕರ್ನಾಟಕದ ಸಚಿವರು ಮತ್ತು ಪ್ರತಿನಿಧಿಗಳನ್ನು ಇದೇ ರೀತಿ ಮಹಾರಾಷ್ಟ್ರಕ್ಕೆ ಅನುಮತಿಸಲಾಗುವುದಿಲ್ಲ ಎಂದು ಶಿವಸೇನೆ ಎಚ್ಚರಿಕೆ ನೀಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಹಲವಾರು ಕನ್ನಡ ಸಂಘಟನೆಗಳು ಶಿವಸೇನೆಯ ಈ ನಿಲುವನ್ನು ತೀವ್ರವಾಗಿ ಟೀಕಿಸಿವೆ.
Advertisement