

ಬೆಂಗಳೂರು: ಲೈಂಗಿಕ ಸಮಸ್ಯೆಗಳೂ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆಯುರ್ವೇದ ಔಷಧ ನೀಡುವುದಾಗಿ ನಂಬಿಸಿ, ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಬರೋಬ್ಬರಿ 48 ಲಕ್ಷ ರುಪಾಯಿ ವಂಚಿಸಿದ್ದ ನಕಲಿ ಟೆಂಟ್ ‘ಗುರೂಜಿ’ ಸೇರಿದಂತೆ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲ್ಲೂಕಿನ ನಿವಾಸಿಗಳಾದ ವಿಜಯ್ ಪ್ರಧಾನ್ ಚಿಟೋಡಿಯಾ (42) ಮತ್ತು ಮನೋಜ್ ಸಿಂಗ್ ಚಿಟೋಡಿಯಾ (29) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಪೊಲೀಸರು 17 ರೀತಿಯ ಆಯುರ್ವೇದ ಔಷಧಿಗಳು, ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಟೆಂಪೋ ಟ್ರಾವೆಲರ್ ಮತ್ತು 19.50 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಔಷಧಿಗಳು, ನಗದು ಮತ್ತು ವಾಹನದ ಒಟ್ಟು ಮೌಲ್ಯ 23.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯಲ್ಲಿ ಈ ಇಬ್ಬರು ಆರೋಪಿಗಳು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ದೇಶದ ಇತರ ಭಾಗಗಳಲ್ಲಿ ರಸ್ತೆಬದಿಯ ಟೆಂಟ್‌ಗಳನ್ನು ಸ್ಥಾಪಿಸಿ, ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಡಿಮೆ ಗುಣಮಟ್ಟದ ಔಷಧಿಗಳನ್ನು ನೀಡುವ ಮೂಲಕ ಜನರನ್ನು ವಂಚಿಸುತ್ತಿದ್ದರು ಎಂದು ತಿಳಿದುಬಂದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಂಚನೆಗೊಳಗಾದ ಟೆಕ್ಕಿ ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಂಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದಾಗ, ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಟೆಂಟ್ ಒಂದರಲ್ಲಿ `ಲೈಂಗಿಕ ಸಮಸ್ಯೆಗೆ ಆಯುರ್ವೇದಿಕ್ ಚಿಕಿತ್ಸೆ’ ಎಂಬ ಜಾಹೀರಾತನ್ನು ಗಮನಿಸಿದ್ದಾರೆ. ಅದೇ ಭರವಸೆಯಿಂದ ಟೆಂಟ್‌ನಲ್ಲಿದ್ದ ವಿಜಯ್ ಗುರೂಜಿಯನ್ನು ಸಂಪರ್ಕಿಸಿದ್ದಾರೆ.
ಈ ವೇಳೆ ಗುರೂಜಿ ಟೆಕ್ಕಿಗೆ `ದೇವರಾಜ್ ಬೂಟಿ’ ಎಂಬ ಔಷಧಿಯನ್ನು ಖರೀದಿಸಲು ಸೂಚಿಸಿದ್ದಾನೆ. ಒಂದು ಗ್ರಾಂ ಔಷಧಿಗೆ 1.5 ಲಕ್ಷ ರೂ. ಎಂದು ಹೇಳಿದ್ದ ಗುರೂಜಿ, ಅದರಂತೆ ಟೆಕ್ಕಿಯಿಂದ 1,60,000 ರೂ. ಪಡೆದುಕೊಂಡಿದ್ದಾನೆ. ಈ ಔಷಧಿಗೆ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಬಾರದು ಮತ್ತು ಒಬ್ಬರೇ ಬಂದು ತೆಗೆದುಕೊಳ್ಳಬೇಕು ಎಂಬ ಷರತ್ತುಗಳನ್ನು ವಿಧಿಸಿದ್ದ. ಅದರಂತೆ ಟೆಕ್ಕಿ ಕೂಡ ಗುರೂಜಿಯ ಮಾತನ್ನು ನಂಬಿ ಹಣ ನೀಡಿದ್ದಾರೆ.
ಹಂತ ಹಂತವಾಗಿ ದೇವರಾಜ್ ಬೂಟಿ ಮತ್ತು `ಭವನ ಬೂಟಿ ತೈಲ’ ಹೆಸರಿನಲ್ಲಿ ದುಬಾರಿ ಔಷಧಿಗಳನ್ನು ಮಾರಾಟ ಮಾಡಿದ್ದಾನೆ. ಟೆಕ್ಕಿ ತಮ್ಮ ಲೈಂಗಿಕ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆಯಿಂದ ಬರೋಬ್ಬರಿ 17 ಲಕ್ಷ ರೂ. ಹಣ ಖರ್ಚು ಮಾಡಿ, ಔಷಧಿಗಳನ್ನು ಖರೀದಿಸಿದ್ದಾರೆ. ಅಷ್ಟೇ ಅಲ್ಲದೆ, ಬ್ಯಾಂಕ್‌ನಲ್ಲಿ 20 ಲಕ್ಷ ರೂ. ಸಾಲ ಪಡೆದು, ಹೀಗೆ ಒಟ್ಟು 48 ಲಕ್ಷ ರೂ. ಹಣವನ್ನು ಗುರೂಜಿಗೆ ನೀಡಿದ್ದಾರೆ.
ಇಷ್ಟೆಲ್ಲಾ ದುಬಾರಿ ಔಷಧಿಗಳನ್ನು ಸೇವಿಸಿದರೂ ಟೆಕ್ಕಿಯ ಲೈಂಗಿಕ ಸಮಸ್ಯೆ ಪರಿಹಾರವಾಗಿಲ್ಲ. ಬದಲಿಗೆ, ಮತ್ತೆ ಅದೇ ಸಮಸ್ಯೆ ಶುರುವಾಗಿದೆ. ಚಿಕಿತ್ಸೆ ಗುಣಮುಖವಾಗದ ಬಗ್ಗೆ ಪ್ರಶ್ನಿಸಿದಾಗ, ಗುರೂಜಿ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ನಂತರ ತಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಾಗ ರಕ್ತ ಪರೀಕ್ಷೆ ಮಾಡಿಸಿದಾಗ, ಆಯುರ್ವೇದ ಚಿಕಿತ್ಸೆಯಿಂದಾಗಿ ಕಿಡ್ನಿಗೆ ಸಮಸ್ಯೆ ಆಗಿರುವುದು ಪತ್ತೆಯಾಗಿದೆ.
ನಂತರ ವೈಟ್‌ಫೀಲ್ಡ್ ನಿವಾಸಿಯಾಗಿರುವ ಟೆಕ್ಕಿ ನವೆಂಬರ್ 22 ರಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ.
Advertisement