

ಬೆಂಗಳೂರು: ಬಂದಿಖಾನೆ ಡಿಜಿಪಿಯಾಗಿ ನೇಮಕದ ಬಳಿಕ ಮೊದಲ ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ಮೊದಲ ಭೇಟಿ ನೀಡಿದ್ದು, ಈ ವೇಳೆ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.
ಕಾರಾಗೃಹ ಇಲಾಖೆಯ ನೂತನ ಡಿಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದ್ದು, ಕಾರಾಗೃಹ ಇಲಾಖೆಯ ಮುಖ್ಯಸ್ಥರಾಗಿದ್ದ ಬಿ. ದಯಾನಂದ್ ಅವರನ್ನ ಪೊಲೀಸ್ ತರಬೇತಿ ಇಲಾಖೆಯ ಎಡಿಜಿಪಿಯಾಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು.
ಅಧಿಕಾರ ಸ್ವೀಕಾರ ಬಳಿಕ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಲೋಕ್ ಕುಮಾರ್ ಅವರು ಜೈಲಿನ ಚೆಕ್ ಪೋಸ್ಟ್ ಬಳಿ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಜೈಲಿನ ಅಧಿಕಾರಿಗಳ ಜೊತೆ ಸೆಂಟ್ರಲ್ ಜೈಲಿನ ಸುತ್ತಮುತ್ತ ಓಡಾಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿ ಬ್ಯಾರಕ್ಗೂ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
ನಟ ದರ್ಶನ್- DGP ಮುಖಾಮುಖಿ
ಇನ್ನು ಇದೇ ವೇಳೆ ಡಿಜಿಪಿ ಅಲೋಕ್ ಕುಮಾರ್ ಅವರು ಕೊಲೆ ಆರೋಪಿ ದರ್ಶನ್ ಬ್ಯಾರಕ್ ಗೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣದ ವಿಚಾರಣೆ ಬಗ್ಗೆ ವಿಚಾರಣೆ ಪಡೆದುಕೊಂಡರು.
ದರ್ಶನ್ ಬಳಿ ಪ್ರಕರಣದ ಬಗ್ಗೆ ವಿವರಣೆ ಪಡೆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ಜೈಲು ಪರಿಶೀಲನೆ ವೇಳೆ ದರ್ಶನ್ ಭೇಟಿ ಮಾಡಿ ಪ್ರಕರಣದ ವಿಚಾರಣೆ ಬಗ್ಗೆ ವಿವರಣೆ ಪಡೆದಿದ್ದೇನೆ.
ಇದೇ 17ರಂದು ನ್ಯಾಯಾಲಯದ ವಿಚಾರಣೆ ಇದೆ. ತಮ್ಮ ಭೇಟಿ ವೇಳೆ ದರ್ಶನ್ ಯಾವುದೇ ಕುಂದುಕೊರತೆ ಬಗ್ಗೆ ಹೇಳಿಲ್ಲ. ದರ್ಶನ್ ಸೇರಿ ಆರು ಮಂದಿ ಒಂದೇ ಬ್ಯಾರಕ್ ನಲ್ಲಿ ಎಲ್ಲರಂತೆ ಇದ್ದಾರೆ ಎಂದು ಸ್ಪಷ್ಟಪಡಿಸಿದರು.
ರಾಜ್ಯಾದ್ಯಂತ ಜೈಲು ಸಿಬ್ಬಂದಿ ತಪಾಸಣೆ, ಗಾಂಜಾ ವಶಕ್ಕೆ
ಇದೇ ವೇಳೆ, ಕಳೆದ 72 ಗಂಟೆಗಳಲ್ಲಿ ರಾಜ್ಯಾದ್ಯಂತ ಜೈಲು ಸಿಬ್ಬಂದಿ ತಪಾಸಣೆಗಳನ್ನು ತೀವ್ರಗೊಳಿಸಿದ್ದಾರೆ, ಇದರಿಂದಾಗಿ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾದ ಕೈದಿಗಳನ್ನು ಇತರ ಜೈಲುಗಳಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.
ಅಂತೆಯೇ ಶಿಸ್ತು ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವ ಕ್ರಮಗಳ ಭಾಗವಾಗಿ ಕಾರವಾರ ಜೈಲಿನಲ್ಲಿ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾದ ನಾಲ್ವರು ಕೈದಿಗಳನ್ನು ಇತರ ಜೈಲುಗಳಿಗೆ ವರ್ಗಾಯಿಸಲಾಗಿದೆ. ಈ ಕ್ರಮಗಳನ್ನು "ಸಣ್ಣ ಹೆಜ್ಜೆಗಳು" ಎಂದು ಬಣ್ಣಿಸಿದ ಡಿಜಿಪಿ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳು, "ಸಾಧಿಸಬೇಕಾದ ದೂರ ಬಹಳಷ್ಟಿದೆ" ಎಂದು ಅವರು ಹೇಳಿದರು.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, "ಕಳೆದ 72 ಗಂಟೆಗಳಲ್ಲಿ ನಮ್ಮ ತಂಡವು ಮಾಡಿದ ಉತ್ತಮ ಕೆಲಸವನ್ನು ಶ್ಲಾಘಿಸಿ. ಬೆಂಗಳೂರು ಜೈಲಿನಲ್ಲಿ ಆರು ಮೊಬೈಲ್ ಫೋನ್‌ಗಳು, ಮೈಸೂರು ಜೈಲಿನಲ್ಲಿ ಆರು ಪ್ಯಾಕೆಟ್ ಗಾಂಜಾ ಮತ್ತು ಕಾರವಾರ ಜೈಲಿನಲ್ಲಿ ಏಳು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಕುಮಾರ್ ಡಿಸೆಂಬರ್ 14 ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಎಲ್ಲ ಬಂದ್ ಆಗ್ಬೇಕು’
ಕೈದಿಗಳಿಗೆ ರಾಜಾತಿಥ್ಯ ವಿಚಾರ ವ್ಯಾಪಕ ಸುದ್ದಿಯಲ್ಲಿರುವಂತೆಯೇ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದ ನೂತನ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಜೈಲಿನ ಹೊರಾಂಗಣ ಸೇರಿ ಪ್ರತಿ ಬ್ಯಾರಕ್, ಅಡುಗೆ ಮನೆ, ಆಸ್ಪತ್ರೆ, ಬೇಕರಿಗಳಿಗೂ ತೆರಳಿ ಎಲ್ಲಾ ಪರಿಶೀಲನೆ ಮಾಡಿದರು.
ಈ ವೇಳೆ ಅಲೋಕ್ ಕುಮಾರ್ ಅವರು ಕೈದಿಗಳ ಬಳಿಯು ಮಾಹಿತಿ ಕಲೆ ಹಾಕಿದರು. ಊಟ, ತಿಂಡಿ, ಶೌಚಾಲಯ ವ್ಯವಸ್ಥೆ ಬಗ್ಗೆ ಕೈದಿಗಳಿಗೆ ಡಿಜಿಪಿ ಪ್ರಶ್ನೆ ಕೇಳಿದ್ದು, ಮೊಬೈಲ್ ಬಳಕೆ ಮಾಡುತ್ತಿದ್ರೆ ಸಿಬ್ಬಂದಿ ವಶಕ್ಕೆ ನೀಡುವಂತೆ ತಾಕೀತು ಕೂಡ ಮಾಡಿದ್ದಾರೆ. ಅಂತೆಯೇ ಕಳ್ಳಾಟ ಆಡಿದ್ರೆ ಕಠಿಣ ಕ್ರಮ ಎದುರಿಸಲು ಸಜ್ಜಾಗಿ ಎಂದು ಎಚ್ಚರಿಕೆ ಕೂಡ ನೀಡಿದರು.
ಗಾಂಜಾ, ಬಿಡಿ ಸಿಗರೇಟ್ ಇನ್ಮೇಲೆ ಸಿಗಲ್ಲ. ಎಲ್ಲಾ ಬಂದ್ ಆಗಬೇಕು ಎಂದು ಅಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ. ವೈದ್ಯರು ಚಿಕಿತ್ಸೆ ಮಾತ್ರ ಕೋಡಬೇಕು. ಅದನ್ನು ಬಿಟ್ಟು ಮೊಬೈಲ್, ಗಾಂಜಾ ಸಾಗಾಣೆ ಮಾಡಿದ್ರೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ನೇರವಾಗಿ ಹೇಳಿದರು. ಅಡುಗೆ ಮನೆಯ ಸಿಬ್ಬಂದಿಗೂ ಎಚ್ಚರಿಸಿರುವ ಅವರು, ಎಡಿಷನಲ್ ಆ್ಯಕ್ಟಿವಿಟಿಗಳು ಬಂದ್ ಆಗಬೇಕು ಎಂದರು. ಬಳಿಕ ಜೈಲಿನ ಬೇಕರಿಗೂ ಡಿಜಿಪಿ ಭೇಟಿ ನೀಡಿದ ಅಲೋಕ್ ಕುಮಾರ್ ಅವರು, ಈಸ್ಟ್ ನಿಂದ ವೈನ್ ತಯಾರಿಸಿದ್ರೆ ವೈಲೆಂಟ್ ಆಗಬೇಕಾಗುತ್ತೆ ಎಂದು ಗರಂ ಆದರು.
ಪೊಲೀಸ್ ಸಿಬ್ಬಂದಿಗೆ ತರಾಟೆ
ಪಾರ್ಕಿಂಗ್ ಅವ್ಯವಸ್ಥೆ ಬಗ್ಗೆ ಪೊಲೀಸ್ ಸಿಬ್ಬಂದಿಯನ್ನ ಇದೇ ವೇಳೆ ಡಿಜಿಪಿ ಅಲೋಕ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ಜಾಗವಿದ್ರೂ ಯಾಕೆ ಸಮರ್ಪಕವಾಗಿ ಅದನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ? ಜಾಗ ಸ್ವಚ್ಛ ಮಾಡಿ ವಾಹನಗಳ ಪಾರ್ಕಿಂಗ್ಗೆ ಸರಿಯಾಗಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
ಸುಮಾರು 50ಕ್ಕೂ ಅಧಿಕ ಅಧಿಕಾರಿಗಳ ಜೊತೆ ಅವರು ಜೈಲ್ ರೌಂಡ್ಸ್ ನಡೆಸಿದ್ದು, ಐಜಿಪಿ ದಿವ್ಯಾ, ಡಿಸಿಪಿ ನಾರಾಯಣ, ಮುಖ್ಯ ಅಧೀಕ್ಷಕ ಅಂಶುಕುಮಾರ್, ಕಮಾಂಡರ್ ವೀರೇಶ್ ಕುಮಾರ್, ಸಹಾಯಕ ಕಮಾಂಡರ್ ಮಾದೇಶ ಸೇರಿದಂತೆ ಇತರ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
Advertisement