

ಬೆಂಗಳೂರು: ಪೊಲೀಸರಂತೆ ಪೋಸ್ ನೀಡಿ ಮನೆ ಲೂಟಿ ಮಾಡುತ್ತಿದ್ದ ನಾಲ್ವರ 'ಖತರ್ ನಾಕ್ ಗ್ಯಾಂಗ್' ಒಂದನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಬಾರಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ಪರೀಕ್ಷೆಯಲ್ಲಿ ಫೇಲ್ ಆಗಿದ್ದ 27ರ ಹರೆಯದ ಯುವಕನೊಬ್ಬ ಪಿಎಸ್‌ಐ ಸಮವಸ್ತ್ರವನ್ನು ಹೊಲೆಸಿಕೊಂಡು, ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಮೂವರು ಸಹಚರರೊಂದಿಗೆ ಸೇರಿ ಒಂಟಿ ಮನೆ ದರೋಡೆ ಮಾಡಿದ್ದರು.
ಕ್ರೈಂ ಪೋಲೀಸರೆಂದು ಬಿಂಬಿಸಿಕೊಂಡು ಸಂತ್ರಸ್ತನ ಮನೆಗೆ ನುಗ್ಗಿದ ತಂಡ, ಆತನನ್ನು ಬೆದರಿಸಿ, ಹಲ್ಲೆ ನಡೆಸಿ, 1.42 ಲಕ್ಷ ರೂ. ದೋಚಿ ಪರಾರಿಯಾಗಿತ್ತು. ಡಿಸೆಂಬರ್ 7 ರಂದು ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ನರಸೀಪುರ ಲೇಔಟ್ ಬಳಿ ಈ ಘಟನೆ ನಡೆದಿತ್ತು. ಬುಧವಾರ ಪೊಲೀಸರು ಈ ಎಲ್ಲಾ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.
ಹೆಚ್, ಮಲ್ಲಿಕಾರ್ಜುನ ಆಲಿಯಾಸ್ ಪಿಎಸ್ ಐ ಮಲ್ಲಣ್ಣ(27) ಸೇಲ್ಸ್ ಮ್ಯಾನ್ ವಿ. ಪ್ರಮೋದ್ (30) ಜಿಮ್ ಟ್ರೈನರ್ ಹೆಚ್. ಟಿ. ವಿನಯ್ (36) ಬಂಧಿತ ಆರೋಪಿಗಳು. ಇವರೆಲ್ಲರೂ ಯಶವಂತಪುರದ ಮತ್ತಿಕೆರೆ ನಿವಾಸಿಗಳಾಗಿದ್ದು, ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಬಾಗಲಗುಂಟೆಯ ಡ್ರೈವರ್ ಪಿ. ಹೃತ್ತಿಕ್ (24) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಲಿಫ್ಟ್ ಆಪರೇಟರ್ ಹಾಗೂ ನರಸೀಪುರ ಲೇಔಟ್ ನಿವಾಸಿ ನವೀನ್ ಕೆ.ಎ ಮನೆಯಲ್ಲಿ ಒಬ್ಬರೇ ಇರುವುದನ್ನು ಅರಿತು ಅವರ ಮನೆಗೆ ನುಗ್ಗಿದ್ದಾರೆ. ಆಗ ಮಲ್ಲಿಕಾರ್ಜುನ್ ಎಂಬಾತ ಸಬ್ ಇನ್ಸ್ ಪೆಕ್ಟರ್ ವೇಷ ಧರಿಸಿದ್ದು, ಇತರರು ಸಾದಾ ಉಡುಪಿನಲ್ಲಿದ್ದು, ಕ್ರೈಂ ಪೊಲೀಸರು ಎಂದು ಹೇಳಿಕೊಂಡು ಮನೆಗೆ ನುಗ್ಗಿದ್ದಾರೆ.
ನವೀನ್ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಶೋಧ ನಡೆಸುವುದಾಗಿ ಬೆದರಿಕೆ ಹಾಕಿ, ಲಾಠಿ ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನವೀನ್ ಅವರ ಮೊಬೈಲ್ ಫೋನ್ ಬಳಸಿ ಅವರ ಬ್ಯಾಂಕ್ ಖಾತೆಯಿಂದ 87,000 ರೂ.ಗಳನ್ನು ವರ್ಗಾಯಿಸುವಂತೆ ಗ್ಯಾಂಗ್ ಒತ್ತಾಯಿಸಿದೆ.
ಅಲ್ಲಿಂದ ಪರಾರಿಯಾಗುವ ಮುನ್ನಾ ಕಬೋರ್ಡ್‌ನಲ್ಲಿ ಇರಿಸಲಾಗಿದ್ದ 53,000 ರೂಪಾಯಿ ನಗದು ಮತ್ತು ಅವರ ಪರ್ಸ್‌ನಿಂದ 2,000 ರೂಪಾಯಿಗಳನ್ನು ತೆಗೆದುಕೊಂಡು ಹೋಗಿದ್ದರು. ಬಳಿಕ ನವೀನ್ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆಯ ವೇಳೆ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ವಿಶ್ಲೇಷಿಸಿ ಆರೋಪಿಯನ್ನು ಡಿ.10ರಂದು ಬಂಧಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಬಳ್ಳಾರಿ ಜಿಲ್ಲೆಯವರಾದ ಮಲ್ಲಿಕಾರ್ಜುನ್ ಎರಡು ಬಾರಿ ಪಿಎಸ್ ಐ ಪರೀಕ್ಷೆಯಲ್ಲಿ ಫೇಲಾಗಿರುವುದು ಬೆಳಕಿಗೆ ಬಂದಿದೆ. ಅವರು ನವೆಂಬರ್‌ನಲ್ಲಿ ಕಾಮಾಕ್ಷಿಪಾಳ್ಯದಲ್ಲಿ ಪಿಎಸ್‌ಐ ಸಮವಸ್ತ್ರವನ್ನು ಹೊಲೆಸಿಕೊಂಡಿದ್ದು, ಸಂತ್ರಸ್ತರನ್ನು ಬೆದರಿಸಲು ಸೇವೆ ಸಲ್ಲಿಸುವ ಅಧಿಕಾರಿ ಎಂದು ತೋರಿಸಿಕೊಳ್ಳುತ್ತಿದದ್ದು ಬಹಿರಂಗವಾಗಿದೆ.
ಈತ ಈ ಹಿಂದೆ ಪಿಎಸ್‌ಐ ಎಂದು ಬಿಂಬಿಸಿ ಸಣ್ಣಪುಟ್ಟ ಅಪರಾಧಗಳನ್ನು ಎಸಗಿದ್ದು, ಪಾರ್ಕ್‌ಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿದ್ದು, ಈತನ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆತ ತನ್ನ ಸಹಚರರೊಂದಿಗೆ ದರೋಡೆಗೆ ಯೋಜನೆ ರೂಪಿಸಿದ್ದು, ಆತನ ಬಂಧನಕ್ಕೆ ಕಾರಣವಾಯಿತು.
45,000 ನಗದು, ಅಪರಾಧಕ್ಕೆ ಬಳಸಿದ್ದ ಸುಮಾರು 6 ಲಕ್ಷ ಮೌಲ್ಯದ ಕಾರು, ದ್ವಿಚಕ್ರ ವಾಹನ, ನಕಲಿ ಪೊಲೀಸ್ ಸಮವಸ್ತ್ರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement