

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿರುವ 5 ನಗರ ಪಾಲಿಕೆಗಳಲ್ಲಿ 650ಕ್ಕೂ ಹೆಚ್ಚು ನಾಮ ನಿರ್ದೇಶಿತ ಸದಸ್ಯರ ನೇಮಕಾತಿ ಆರೋಪ ಆಧಾರ ರಹಿತವಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟನೆ ನೀಡಿದೆ.
ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ಮಸೂದೆ, 2025 ಕ್ಕೆ ತಿದ್ದುಪಡಿಗಳನ್ನು ತಂದಿದ್ದು, ಈ ಹಿನ್ನೆಲೆಯಲ್ಲಿ ಈ ಇಲಾಖೆ ಸ್ಪಷ್ಟನೆ ನೀಡಿದೆ.
ತಿದ್ದುಪಡಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಆರೋಪಗಳ ಮೂಲಕ ಜನರ ಹಾದಿ ತಪ್ಪಿಸುವ ಕೆಲಸವಾಗುತ್ತಿದೆ. ತಿದ್ದುಪಡಿಯಿಂದ ಐದು ಪಾಲಿಕೆಗಳ ಚುನಾವಣೆಯನ್ನು ವಿಳಂಬಗೊಳಿಸುವ ಉದ್ದೇಶವಿಲ್ಲ.
"ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024 ರ ಅಡಿಯಲ್ಲಿ, ಗ್ರೇಟರ್ ಬೆಂಗಳೂರು ಪ್ರದೇಶದ ಪ್ರಾದೇಶಿಕ ಮಿತಿಗಳನ್ನು ಕಾಲಕಾಲಕ್ಕೆ ಮಾರ್ಪಡಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತಾಪಿತ ನಾಮ ನಿರ್ದೇಶಿತ ವ್ಯಕ್ತಿಯು ಆ ನಗರ ಪಾಲಿಕೆಯ ಹೆಚ್ಚುವರಿ ಸದಸ್ಯರಾಗಿ ಮುಂದುವರೆಯಲು ಕಾಲಮಿತಿಯನ್ನು ಕಲ್ಪಿಸಲಾಗಿದೆ. ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾದ ಸದಸ್ಯರು ಆ ನಗರ ಪಾಲಿಕೆಯ ಉಳಿದ ಅವಧಿಯವರೆಗೆ ಮಾತ್ರ ಸದಸ್ಯತ್ವವನ್ನು ಹೊಂದಿರುತ್ತಾರೆ. ಎಲ್ಲಾ ಅಂಶಗಳನ್ನು ಪ್ರಸ್ತಾಪಿತ ತಿದ್ದುಪಡಿ ವಿಧೇಯಕದಲ್ಲಿ ಗಮನಿಸಬಹುದಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ಗಮನಿಸದೇ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನಿಸಿರುವುದು ಸೂಕ್ತವಾದ ಕ್ರಮವಲ್ಲ ಎಂದು ಹೇಳಿದೆ.
ನೂತನವಾಗಿ ರಚಿಸಲಾದ ನಗರ ಪಾಲಿಕೆಗಳ ವಾರ್ಡ್‌ಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರವು ಬದ್ದವಾಗಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ದಿನಾಂಕ: 02-09-2025ರ ಪ್ರತ್ಯೇಕ ಅಧಿಸೂಚನೆಗಳಲ್ಲಿ ಗ್ರೇಟರ್ ಬೆಂಗಳೂರು ಪ್ರದೇಶದ 05 ನಗರ ಪಾಲಿಕೆಗಳ ಗಡಿ ಪ್ರದೇಶಗಳನ್ನು ನಿರ್ದಿಷ್ಟಪಡಿಸಿ ನಗರ ಪಾಲಿಕೆಗಳನ್ನು ಸ್ಥಾಪಿಸಿ ಆದೇಶಿಸಲಾಗಿದೆ. 19-11-2025 ಮತ್ತು 01-12-2025 ರಂದು ಪ್ರತ್ಯೇಕವಾಗಿ ಹೊರಡಿಸಿರುವ ಅಧಿಸೂಚನೆಗಳ ಮೂಲಕ 05 ನಗರ ಪಾಲಿಕೆಗಳಲ್ಲಿ ಒಟ್ಟು 369 ವಾರ್ಡ್‌ಗಳ ಪುನರ್ ವಿಂಗಡಣೆಯನ್ನು ಮಾಡಲಾಗಿದೆ. ಈ ರೀತಿ 369 ವಾರ್ಡ್‌ಗಳ ಪುನರ್ ವಿಂಗಡಣೆ ಈಗಾಗಲೇ ಆಗಿರುವುದರಿಂದ, ಸದರಿ ವಾರ್ಡ್‌ಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಅವಕಾಶವಿರುವುದಿಲ್ಲ. ಈ ವಾರ್ಡ್ ಗಳಿಗೆ ಚುನಾವಣೆ ನಡೆಸಿ, ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಪೂರಕವಾಗಿ ದಿನಾಂಕ: 01-09-2025ರ ಅಧಿಸೂಚನೆಯ ಮೂಲಕ ಗ್ರೇಟರ್ ಬೆಂಗಳೂರು ಆಡಳಿತ (ಚುನಾವಣೆ) ನಿಯಮಗಳು, 2025 ಮತ್ತು ದಿನಾಂಕ: 15-09-2025ರ ಅಧಿಸೂಚನೆಯ ಮೂಲಕ ಗ್ರೇಟರ್ ಬೆಂಗಳೂರು ಆಡಳಿತ (ಮತದಾರರ ನೋಂದಣಿ) ನಿಯಮಗಳು, 2025 ಗಳನ್ನು ಅಂತಿಮಗೊಳಿಸಿ ಹೊರಡಿಸಲಾಗಿರುತ್ತದೆ. ರಾಜ್ಯ ಚುನಾವಣಾ ಆಯೋಗವು ಸಹ ಗ್ರೇಟರ್ ಬೆಂಗಳೂರು ಪ್ರದೇಶದ 05 ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ವಾರ್ಡ್ ವಾರು ಮತದಾರರ ಪಟ್ಟಿಯನ್ನು ತಯಾರಿಸುವ ಬಗ್ಗೆ ಕಾರ್ಯಕ್ರಮ ಪಟ್ಟಿಯನ್ನು ನಿಗದಿಪಡಿಸಿ, ಆ ನಿಟ್ಟಿನಲ್ಲಿ ಕಾಲಮಿತಿಯಲ್ಲಿ ಕ್ರಮವಹಿಸಲಾಗುತ್ತಿದೆ.
ಇನ್ನು ಗ್ರೇಟರ್ ಬೆಂಗಳೂರು ಪ್ರದೇಶದ 5 ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ಸರ್ಕಾರವು ಎಲ್ಲಾ ಅಗತ್ಯ ಕ್ರಮವಹಿಸುತ್ತಿರುವ ಈ ಸಂದರ್ಭದಲ್ಲಿ ತಪ್ಪು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವುದು ಸಮಂಜಸವಲ್ಲ ಎಂದು ತಿಳಿಸಿದೆ.
Advertisement