

ಬೆಂಗಳೂರು: ಎರಡು ವರ್ಷಗಳಲ್ಲಿ ಪಿಲ್ಲರ್ ನಿರ್ಮಿಸಲು ಸಾಧ್ಯವಾಗಿಲ್ಲ. ಎರಡು ತಿಂಗಳಲ್ಲಿ ಮ್ಯಾಜಿಕ್ ಮಾಡ್ತೀರಾ? ಎಂದು ಪ್ರಶ್ನಿಸಿದ ಸಚಿವ ಕೃಷ್ಣ ಬೈರೇಗೌಡ ಅವರು ನಮ್ಮ ಮೆಟ್ರೋ ಅಧಿಕಾರಿಗಳನ್ನು ಭಾನುವಾರ ತರಾಟೆಗೆ ತೆಗೆದುಕೊಂಡರು.
ನಮ್ಮ ಮೆಟ್ರೊ ನಾಗವಾರ ನಿಲ್ದಾಣದಿಂದ ಬಾಗಲೂರು ಕ್ರಾಸ್ ನಿಲ್ದಾಣದವರೆಗಿನ ಎರಡನೇ ಹಂತದ ಕಾಮಗಾರಿಯನ್ನು ಭಾನುವಾರ ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, ನಮ್ಮ ಮೆಟ್ರೋ ಮತ್ತು ಎನ್‌ಸಿಸಿ ಗುತ್ತಿಗೆ ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪರಿಶೀಲನೆ ವೇಳೆ ಕಾಮಗಾರಿ ವಿಳಂಬವಾಗುತ್ತಿರುವುದು, ಪಿಲ್ಲರ್ ನಿರ್ಮಾಣ ಅಪೂರ್ಣಗೊಂಡಿರುವುದು, ರಸ್ತೆಗಳನ್ನು ಬಂದ್ ಮಾಡಿರುವುದು ಹಾಗೂ ಪಾದಚಾರಿ ಮಾರ್ಗಗಳು ಅವಶೇಷಗಳಿಂದ ತುಂಬಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲಗೊಂಡರು.
ಬಳಿಕ ತಕ್ಷಣವೇ ತ್ಯಾಜ್ಯ ತೆರವು, ರಸ್ತೆ ತಡೆಗಳನ್ನು ತೆಗೆದುಹಾಕುವುದು ಮತ್ತು ಸಂಚಾರ ಮತ್ತು ಪಾದಚಾರಿಗಳ ಸಂಚಾರವನ್ನು ಸುಗಮಗೊಳಿಸಲು ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಒಂದೇ ಸ್ಥಳದಲ್ಲಿ ನಿರ್ಮಾಣ ಕಾರ್ಯವು ರಸ್ತೆ ಅಡಚಣೆಗಳು ಮತ್ತು ಇತರ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಒಂದು ವರ್ಷದ ಹಿಂದೆ ಈ ಮಾರ್ಗವನ್ನು ಬಂದ್ ಮಾಡಿದ್ದೀರಿ. ಇಷ್ಟು ದಿನ ಏನು ಮಾಡುತ್ತಿದ್ದೀರಿ? 2 ವರ್ಷಗಳಲ್ಲಿ ಪಿಲ್ಲರ್ ನಿರ್ಮಿಸಲು ಸಾಧ್ಯವಾಗಿಲ್ಲ. ಎರಡು ತಿಂಗಳಲ್ಲಿ ಮ್ಯಾಜಿಕ್ ಮಾಡ್ತೀರಾ? ನನಗೆ ಪಿಲ್ಲರ್ ಕಾಣಿಸುತ್ತಿಲ್ಲ. ನಾನೇನು ಕುರುಡ ಅಂದುಕೊಂಡ್ರಾ? ಒಂದು ಪಿಲ್ಲರ್ ನಿರ್ಮಿಸಲು ಎರಡು ವರ್ಷ ಬೇಕಾ ಎಂದು ಪ್ರಶ್ನಿಸಿದರು.
ಎಲ್ಲೋ ನಿರ್ಮಾಣ ಕಾರ್ಯ ನಡೆಯುತ್ತಿದ್ದರೆ ಇನ್ನೆಲ್ಲೋ ಏಕೆ ರಸ್ತೆ ಬಂದ್ ಮಾಡ್ತೀರಿ. ಜನರಿಗೆ ತೊಂದರೆ ಕೊಡ್ತೀರಿ? ಪಾದಚಾರಿ ರಸ್ತೆಯೂ ಇಲ್ಲ. ವಾಹನ ಸಂಚಾರಕ್ಕೂ ತೊಡಕು. ಯಾಕೆ ಹೀಗೆ ಮಾಡುತ್ತೀರಿ? ಕೂಡಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಸೂಚನೆ ನೀಡಿದರು.
ಬಳಿಕ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ ಮೆಟ್ರೋ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, ದೀರ್ಘಾವಧಿಯ ನಿರ್ಮಾಣವು ಉತ್ತರ ಬೆಂಗಳೂರಿನಲ್ಲಿ ನಿವಾಸಿಗಳು ಮತ್ತು ಪ್ರಯಾಣಿಕರಿಗೆ ಸಂಕಷ್ಟವನ್ನು ಎದುರು ಮಾಡಲಿದೆ. ಹೀಗಾಗಿ ಕಾಮಗಾರಿ ವಿಳಂಬ ಮತ್ತು ಕಳಪೆ ಕೆಲಸವನ್ನು ಸಹಿಸಲಾಗುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Advertisement