

ಬೆಂಗಳೂರು: ತನ್ನ ಮಗಳಿಗಾಗಿ ಕಿರುತೆರೆ ನಟಿ ಪತ್ನಿ ಚೈತ್ರಾಳನ್ನು ಆಕೆಯ ಪತಿ ಹಾಗೂ ನಿರ್ಮಾಪಕ ಹರ್ಷವರ್ಧನ್ ಅಪಹರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು.. ನಿರ್ಮಾಪಕರೊಬ್ಬರು ಮಗಳಿಗಾಗಿ ಪತ್ನಿಯನ್ನು ಅಪಹರಣ ಮಾಡಿರುವ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 'ನಿನ್ನಲೇನೋ ಹೇಳಬೇಕು' ಎಂಬ ಸಿನಿಮಾದ ನಿರ್ಮಾಪಕ ಹರ್ಷವರ್ಧನ್ ತಮ್ಮ ಪತ್ನಿ, ಕಿರುತೆರೆ ನಟಿ ಚೈತ್ರಾ ಎಂಬುವವರನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.
2023ರಲ್ಲಿ ಕಿರುತೆರೆ ನಟಿ ಚೈತ್ರಾ ಎಂಬವರನ್ನು ನಿರ್ಮಾಪಕ ಹರ್ಷವರ್ಧನ್ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ವರ್ಷದ ಮಗುವಿದೆ. ಇದೀಗ ಮಗಳಿಗಾಗಿ ಪತ್ನಿಯನ್ನು ಅಪಹರಣ ಮಾಡಿರುವ ಆರೋಪ ಹರ್ಷವರ್ಧನ್ ವಿರುದ್ಧ ಕೇಳಿ ಬಂದಿದೆ. ಪತ್ನಿಯನ್ನ ಕಿಡ್ನಾಪ್ ಮಾಡಿ, ನಿನ್ನ ಮಗಳು ಬೇಕು ಅಂದ್ರೆ ನನ್ನ ಮಗಳನ್ನ ಕೊಡು ಎಂದು ಅತ್ತೆಗೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ಮಗಳ ಬಿಟ್ಟಿರಲಾಗದೇ ಪತ್ನಿ ಅಪಹರಣ
ಮಗುವಾದ ಬಳಿಕ ಕೌಟುಂಬಿಕ ಕಲಹ ಹಿನ್ನೆಲೆ ಹರ್ಷವರ್ಧನ್ ಮತ್ತು ಚೈತ್ರಾ ಪ್ರತ್ಯೇಕವಾಗಿ ವಾಸ ಮಾಡಲು ಆರಂಭಿಸಿದ್ದರು. ಮುದ್ದಿನ ಮಗಳನ್ನು ಬಿಟ್ಟಿರಲು ಆಗದೇ ಪತ್ನಿಯನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.
ಆಗಿದ್ದೇನು?
ಹರ್ಷವರ್ಧನ್ ತಮ್ಮ ಸ್ನೇಹಿತ ಕೌಶಿಕ್ ಎಂಬಾತನ ಮೂಲಕ ಪತ್ನಿ ಚೈತ್ರಾಗೆ ಕರೆ ಮಾಡಿಸಿ, ಸೀರಿಯಲ್ ಚಿತ್ರೀಕರಣಕ್ಕಾಗಿ ಮೈಸೂರಿಗೆ ಬರುವಂತೆ ಹೇಳಿಸಲಾಗಿದೆ. ಅಡ್ವಾನ್ಸ್ ಅಂತ 20 ಸಾವಿರ ರೂಪಾಯಿ ನೀಡಲಾಗಿತ್ತು. ಮೈಸೂರಿಗೆ ಬಂದ ಸಂದರ್ಭದಲ್ಲಿ ಪತ್ನಿಯನ್ನು ಅಪಹರಿಸಿ ಮಗಳನ್ನು ಕಳುಹಿಸುವಂತೆ ಡಿಮ್ಯಾಂಡ್ ಮಾಡಲಾಗಿದೆ.
ಅಪಹರಣದ ವಿಷಯ ತಿಳಿಯುತ್ತಿದ್ದಂತೆ ಚೈತ್ರಾ ಸೋದರಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ಲಾನ್ ಮಾಡಿ ಮೈಸೂರಿನ ರಸ್ತೆ ಬಳಿ ಪತ್ನಿಯನ್ನು ಅಪಹರಿಸಿ ಅತ್ತೆಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಠಾಣೆಯ ಪೊಲೀಸರು ಸಂಪರ್ಕ ಮಾಡ್ತಿದ್ದಂತೆ ಪತ್ನಿಯನ್ನು ಬಿಟ್ಟು ಕಳುಹಿಸಿದ್ದಾರೆ. ಇದೀಗ ಎಲ್ಲರನ್ನು ಠಾಣೆಗೆ ಕರೆಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ದಂಪತಿಗಳು ಕೌಟುಂಬಿಕ ಕಲಹ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಮಾತನಾಡಿಕೊಂಡು ಸರಿ ಮಾಡಿಕೊಳ್ತಿದ್ದೀವಿ ಅಂತ ಪತಿ-ಪತ್ನಿ ಹೇಳಿಕೊಂಡಿದ್ದಾರೆ. ಆ ಬಳಿಕ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಆರೋಪಿಯನ್ನ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.
ವರ್ಧನ್ ಸಿನಿಮಾಸ್
ವರ್ಧನ್ ಸಿನಿಮಾಸ್ ಕಂಪನಿಯ ನಿರ್ಮಾಪಕರಾಗಿರುವ ಹರ್ಷವರ್ಧನ್, ನಿನ್ನಲೇನೋ ಹೇಳಬೇಕು ಎಂಬ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹರ್ಷವರ್ಧನ್ ಮತ್ತು ಚೈತ್ರಾ ಜೊತೆಯಾಗಿ ನಟಿಸಿದ್ದಾರೆ.
Advertisement