
ಗೃಹಲಕ್ಷ್ಮಿ ಯೋಜನೆ ಹಣದ ವಿಚಾರವಾಗಿ ವಿಧಾನಸಭೆ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಭಾರಿ ಮಾತಿನ ಚಕಮಕಿ ನಡೆದಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಭಾತ್ಯಾಗ ನಡೆಸಿದ ಪ್ರಸಂಗ ನಡೆಯಿತು. ಆಗಸ್ಟ್‌ವರೆಗಿನ ಎಲ್ಲಾ ಕಂತುಗಳನ್ನು ಯೋಜನೆಯಡಿ ಪಾವತಿಸಲಾಗಿದೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನವನ್ನು "ದಾರಿ ತಪ್ಪಿಸಿದ್ದಾರೆ" ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ಮಹಿಳಾ ಸಹಾಯ ಯೋಜನೆಯಡಿ 1.26 ಕೋಟಿ ಫಲಾನುಭವಿಗಳಿಗೆ ಎರಡು ತಿಂಗಳ ಕಂತುಗಳನ್ನು "ವಿತರಿಸದಿರುವುದನ್ನು ವಿರೋಧಿಸಿದ ಬಿಜೆಪಿ ಬುಧವಾರ ವಿಧಾನಸಭೆಯಿಂದ ಸಭಾತ್ಯಾಗ ಮಾಡಿತು. ಈ ಬೆನ್ನಲ್ಲೇ ತಪ್ಪು ಮಾಹಿತಿ ಆರೋಪದ ಹಿನ್ನೆಲೆ ಸಚಿವೆ ಸ್ಪಷ್ಟನೆ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಪಾವತಿಯಲ್ಲಿನ ವಿಳಂಬವನ್ನು ಒಪ್ಪಿಕೊಂಡ ಸಚಿವರು, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಹಣವನ್ನು ಬೇರೆ ಕಡೆಗೆ ವರ್ಗಾಯಿಸಲಾಗಿಲ್ಲ, ದುರುಪಯೋಗವಾಗಿಲ್ಲ ಪರಿಶೀಲನೆ ವೇಳೆ ಎರಡು ತಿಂಗಳ ಹಣ ಪಾವತಿಯಲ್ಲಿ ವ್ಯತ್ಯಯವಾಗಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ದೆಹಲಿಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ವಾಹನಗಳ ಗುಜರಿ ನೀತಿ ಇದೀಗ ಕರ್ನಾಟಕದಲ್ಲೂ ಗಂಭೀರವಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆಯಲ್ಲಿದೆ. ರಾಜ್ಯ ಸರ್ಕಾರ ಎಲ್ಲಾ ಸರಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ, ಸರಕಾರದ ಇತರೆ ಅಧೀನ ಸಂಸ್ಥೆಗಳಿಗೆ ಸೇರಿದ ನೋಂದಣಿಯಾಗಿ ಹದಿನೈದು ವರ್ಷ ಮೀರಿದ ವಾಹನಗಳನ್ನು ಕಡ್ಡಾಯವಾಗಿ ರಾಜ್ಯದಲ್ಲಿ ಸ್ಥಾಪಿತವಾಗಿರುವ ರಿಜಿಸ್ಟರ್ಡ ವೆಹಿಕಲ್ ಸ್ಕ್ರ್ಯಾಪಿಂಗ್ ಫೆಸಿಲಿಟಿ (Registered Vehicle Scrapping Facility) ಗಳಲ್ಲಿಯೇ ಸ್ಕ್ರ್ಯಾಪ್ ಮಾಡಲು ಕಳೆದ ಸೆಪ್ಡೆಂಬರ್ 12ರಂದು ಅನುಮೋದನೆ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಇಂದು ಸದಸ್ಯರಾದ ಗೋವಿಂದ ರಾಜು ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಾರಿಗೆ ಸಂಸ್ಥೆಗಳ ಬಸ್ಸುಗಳನ್ನು ಹೊರತುಪಡಿಸಿ 15 ವರ್ಷಗಳು ಮೀರಿದ ಸರಕಾರಿ ವಾಹನಗಳ ನೋಂದಣಿಯನ್ನು ಕೇಂದ್ರ ಸರಕಾರವು ವಾಹನ್ ಪೊರ್ಟಲಿನಲ್ಲಿ ರದ್ದುಪಡಿಸಲಾಗಿದೆ. 17,059 ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದು ಬಾಕಿ ಇದೆ ಎಂದು ತಿಳಿಸಿದರು.
ಮಹಿಳೆಯೊಬ್ಬರ ಅತಿರೇಕದ ಪ್ರೇಮ ಕಾಟ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರೀತಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದ ಮಹಿಳೆ, ತಾನು ಕಾಂಗ್ರೆಸ್ ಕಾರ್ಯಕರ್ತೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ತನಗೆ ಪರಿಚಯ ಎಂದು ಹೇಳಿಕೊಂಡಿದ್ದಾರೆ. ನನ್ನ ಪ್ರೀತಿಯನ್ನು ನೀವು ಒಪ್ಪಿಕೊಳ್ಳುತ್ತಿಲ್ಲ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಸಾವಿಗೆ ನೀವೇ ಕಾರಣ ಎಂದು ಬರೆದು, ರಕ್ತದಲ್ಲಿ ಬರೆದ ಪತ್ರವನ್ನು ಪೋಸ್ಟ್ ಮೂಲಕ ಠಾಣೆಗೆ ಕಳುಹಿಸಿದ್ದಾಳೆ. ಮಹಿಳೆಯ ನಿರಂತರ ಕಾಟದಿಂದ ಬೇಸತ್ತ ಇನ್ಸ್ಪೆಕ್ಟರ್ ಕರ್ತವ್ಯಕ್ಕೆ ಅಡ್ಡಿಪಡಿಸಿದ, ಆತ್ಮಹತ್ಯೆ ಬೆದರಿಕೆ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದ ಬಳಿ ಇಂದು ಆಡಳಿತ ಪಕ್ಷ ಕಾಂಗ್ರೆಸ್ ನ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನರೇಗಾ ಹೆಸರನ್ನು ಬದಲಿಸುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ "ದ್ವೇಷ ರಾಜಕೀಯ" ನಡೆಸುತ್ತಿದೆ ಎಂದು ಆರೋಪಿಸಿ ಸಿಎಂ-ಡಿಸಿಎಂ ಸೇರಿದಂತೆ ಬಹುತೇಕ ಕಾಂಗ್ರೆಸ್ ಸದಸ್ಯರು ಹೊರಗೆ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ನ ಪ್ರತಿಭಟನೆಯನ್ನು ಟೀಕಿಸಿರುವ ಬಿಜೆಪಿ- ಜೆಡಿಎಸ್ ಆಡಳಿತ ಪಕ್ಷದ ಸದಸ್ಯರು ಈ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳನ್ನು ನಿರ್ಲಕ್ಷಿಸಿ ಕಾಂಗ್ರೆಸ್ ರಾಜ್ಯದ ಜನರನ್ನು ಅವಮಾನಿಸಿದೆ ಎಂದು ಹೇಳಿದ್ದಾರೆ.
ರಾಜ್ಯದಾದ್ಯಂತ ಕಳೆದ 36 ಗಂಟೆಗಳಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್‌ಗಳು ಮತ್ತು ಗಾಂಜಾ ಸೇರಿದಂತೆ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಕಾರಾಗೃಹ ವಿಭಾಗದ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಬುಧವಾರ ಹೇಳಿದ್ದಾರೆ. ಬೆಂಗಳೂರಿನ ಜೈಲಿನಿಂದ 6ಮೊಬೈಲ್ ಫೋನ್‌ಗಳು ಮತ್ತು 4 ಚಾಕುಗಳು, ಮೈಸೂರು ಜೈಲಿನಿಂದ 9 ಮೊಬೈಲ್ ಫೋನ್‌ಗಳು ಮತ್ತು 11 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಜೈಲುಗಳೊಳಗಿನ ಅಕ್ರಮ ಚಟುವಟಿಕೆಗಳನ್ನು ತಡೆಯಲು ಇಂತಹ ವಿಶೇಷ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ತಿಳಿಸಿದ್ದಾರೆ.
Advertisement