

ಬೆಳಗಾವಿ: ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಹೊರವಲಯದಲ್ಲಿ ನಡೆದಿದೆ.
ಮಂಜುನಾಥ್ ಬೈರ್ನಟ್ಟಿ(30) ಮೃತ ಬೈಕ್ ಸವಾರ. ಮೃತ ಮಂಜುನಾಥ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷಾ ಸಕ್ಕರೆ ಕಾರ್ಖಾನೆಗೆ ಕೆಲಸಕ್ಕೆ ಹೊರಟ್ಟಿದ್ದರು. ಅತ್ತ ರಾಜೇಂದ್ರ ಪ್ರಸಾದ್ ಕಾರು ಯಲ್ಲಮ್ಮನ ದರ್ಶನ ಪಡೆದು ವಾಪಸಾಗುವಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕಾರು ಗುದ್ದಿದ ರಭಸಕ್ಕೆ ಮಂಜುನಾಥ್ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ ರಾಜೇಂದ್ರ ಪ್ರಸಾದ್ ಹಾಗೂ ಕಾರು ಚಾಲಕನಿಗೂ ಗಾಯಗಳಾಗಿದ್ದು, ಧಾರವಾಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಆಸ್ಪತ್ರೆಗೆ ಡಿಕೆಶಿ ಭೇಟಿ
ಏತನ್ಮಧ್ಯೆ ರಾಜೇಂದ್ರ ಪ್ರಸಾದ್ ಹಾಗೂ ಚಾಲಕ ಹೇಮಂತ್ ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಡಿಕೆ.ಶಿವಕುಮಾರ್ ಅವರು ಭೇಟಿ ನೀಡಿದ್ದು, ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೇಂದ್ರ ಪ್ರಸಾದ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಅವರಿಗೆ ಎಲ್ಲಾ ಸ್ಕ್ಯಾನಿಂಗ್ ಮತ್ತು ಪರೀಕ್ಷೆಗಳನ್ನು ಮಾಡಲಾಗಿದೆ. ಸದ್ಯಕ್ಕೆ ಆತಂಕ ಪಡುವಂತಹದ್ದೇನೂ ಇಲ್ಲ. ಯಾವುದೇ ದೊಡ್ಡ ಮಟ್ಟದ ಫ್ರ್ಯಾಕ್ಚರ್ಗಳು ಸಂಭವಿಸಿಲ್ಲ. ಆದರೆ ಕತ್ತಿನ ಭಾಗದಲ್ಲಿ ತೀವ್ರವಾದ ನೋವಿದೆ ಎಂದು ಅವರು ಹೇಳುತ್ತಿದ್ದಾರೆ. ವೈದ್ಯರು ಒಂದು ಅಥವಾ ಎರಡು ದಿನ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆಂದು ಹೇಳಿದರು.
ಇನ್ನು ಕಾರು ಚಾಲಕ ಹೇಮಂತ್ ಅವರಿಗೂ ಎದೆಯ ಭಾಗದಲ್ಲಿ ನೋವಿದ್ದು, ಅವರಿಗೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಯಲ್ಲಮ್ಮ ದೇವಿಯ ದರ್ಶನ ಮುಗಿಸಿ ವಾಪಸಾಗುವಾಗ ಈ ಘಟನೆ ನಡೆದಿದೆ. ಚಾಲಕ ಹೇಮಂತ್ ಹೇಳುವ ಪ್ರಕಾರ, ಮದ್ಯದಲ್ಲಿ ಬೈಕ್ ಅಡ್ಡ ಬಂದ ಕಾರಣ ಈ ದುರ್ಘಟನೆ ಸಂಭವಿಸಿದೆ. ಕಾರಿನ ಸ್ಥಿತಿಯನ್ನು ನೋಡಿದರೆ ಆ ದೇವಿಯೇ ಇವರನ್ನು ಕಾಪಾಡಿದ್ದಾಳೆ ಎಂದು ಅನ್ನಿಸುತ್ತದೆ ಎಂದರು.
ಅಪಘಾತದಲ್ಲಿ ಯುವಕ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಆ ಯುವಕ ಬಹಳ ಚಿಕ್ಕ ವಯಸ್ಸಿನವನು. ಅವರ ಕುಟುಂಬಕ್ಕೆ ಆಗಿರುವ ನೋವಿನಲ್ಲಿ ನಾವೆಲ್ಲರೂ ಭಾಗಿಗಳಾಗಿದ್ದೇವೆ. ಈಗಾಗಲೇ ನಮ್ಮ ಸಚಿವರನ್ನು ಅವರ ಕುಟುಂಬದವರನ್ನು ಭೇಟಿ ಮಾಡಲು ಕಳುಹಿಸಿಕೊಡುತ್ತೇನೆ. ನಾನು ಕೂಡ ಬಿಡುವು ಮಾಡಿಕೊಂಡು ಅವರ ಮನೆಗೆ ಭೇಟಿ ನೀಡುತ್ತೇನೆಂದು ತಿಳಿಸಿದರು.
Advertisement