

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ (ಕೆಎಂವಿಎಸ್‌ಟಿಡಿಸಿಎಲ್) ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಮತ್ತು ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಸೇರಿದ ₹8.07 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತಿಳಿಸಿದೆ.
'ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಮಾಜಿ ಸಚಿವ ಬಿ ನಾಗೇಂದ್ರ ಅವರಿಗೆ ಸೇರಿದ ವಸತಿ/ವಾಣಿಜ್ಯ ಭೂಮಿ ಮತ್ತು ಕಟ್ಟಡ ಸೇರಿದಂತೆ ನಾಲ್ಕು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ' ಎಂದು ಇ.ಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕೆಎಂವಿಎಸ್‌ಟಿಡಿಸಿಎಲ್‌ನಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ರಾಜ್ಯದ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ ತನಿಖೆ ಆರಂಭಿಸಿದ್ದ ಇ.ಡಿ ಕರ್ನಾಟಕ ಮತ್ತು ಇತರ ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು. ಪ್ರಕರಣದಲ್ಲಿ ನಾಗೇಂದ್ರ ಸೇರಿದಂತೆ ಆರು ಜನರನ್ನು ಬಂಧಿಸಿತ್ತು. ನಂತರ, ನಾಗೇಂದ್ರ ಸೇರಿದಂತೆ 25 ಆರೋಪಿಗಳ ವಿರುದ್ಧ 2024ರ ಸೆಪ್ಟೆಂಬರ್ 9ರಂದು ನಗರ ಪ್ರಧಾನ ಸಿವಿಲ್ ಮತ್ತು ಸೆಷನ್ಯ್ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು.
'ಬಿ ನಾಗೇಂದ್ರ ಅವರ ಅಪರಾಧದ ಆದಾಯ (ಪಿಒಸಿ) ಪತ್ತೆಹಚ್ಚಲು ಎಲ್ಲ ಪ್ರಯತ್ನಗಳನ್ನು ಮಾಡಲಾಯಿತು. ಆದಾಗ್ಯೂ, ಎಲ್ಲ ಪಿಒಸಿಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅದನ್ನು ಬಿ ನಾಗೇಂದ್ರ ಈಗಾಗಲೇ ಖಾಲಿ ಮಾಡಿದ್ದಾರೆ ಅಥವಾ ಮರೆಮಾಡಿದ್ದಾರೆ ಎಂದು ತೋರುತ್ತದೆ. ಹೀಗಾಗಿ, ಜಾರಿ ನಿರ್ದೇಶನಾಲಯವು (ED) ಅಪರಾಧದ ಆದಾಯಕ್ಕೆ (POC) ಸಮಾನ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಬಿ ನಾಗೇಂದ್ರ ಅವರಿಗೆ ಸೇರಿದ ₹8.07 ಕೋಟಿ (ಅಂದಾಜು) ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಸದ್ಯ ತನಿಖೆ ಮುಂದುವರಿದಿದೆ' ಎಂದು ಇ.ಡಿ ತಿಳಿಸಿದೆ.
Advertisement