

ಬೆಂಗಳೂರು: ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಲಾಡ್ಜ್ ಒಂದರಲ್ಲಿ 16 ವರ್ಷದ ಪಿಯು ವಿದ್ಯಾರ್ಥಿನಿಗೆ ಬಲವಂತವಾಗಿ ಮದ್ಯ ಕುಡಿಸಿ, ನಂತರ ಆಕೆಯ 17 ವರ್ಷದ ಗೆಳೆಯ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಕೃತ್ಯದಲ್ಲಿ ಇತರ ಇಬ್ಬರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಇದು ಸಾಮೂಹಿಕ ಅತ್ಯಾಚಾರ ಪ್ರಕರಣವೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಕೇರಳದವರು. ಬಾಲಕಿ ತನ್ನ ಹೆತ್ತವರೊಂದಿಗೆ ನಗರದಲ್ಲಿ ವಾಸಿಸುತ್ತಿದ್ದು, ಪ್ರಸಿದ್ಧ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯು ವ್ಯಾಸಂಗ ಮಾಡುತ್ತಿದ್ದಾಳೆ. ಹದಿನೇಳುವರೆ ವರ್ಷದ ಆರೋಪಿ ಕಾಲೇಜು ಬಿಟ್ಟಿದ್ದು, ದೇವನಹಳ್ಳಿ ನಿವಾಸಿಯಾಗಿದ್ದಾನೆ. ಘಟನೆ ನಡೆದಾಗ ಕೋಣೆಯಲ್ಲಿದ್ದ ಅವನ ಇಬ್ಬರು ಸ್ನೇಹಿತರು ವಯಸ್ಕರಾಗಿದ್ದು, ಅವರ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಮತ್ತು ಸಂತ್ರಸ್ತೆ ಒಂದು ತಿಂಗಳ ಹಿಂದೆ ಕಾಲೇಜು ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಚಾಟ್ ಮಾಡಿದ ನಂತರ ಇಬ್ಬರು ಕ್ಲೋಸ್ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೋಷಕರಿಗೆ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಂತ್ರಸ್ತೆ ಪತ್ತೆಯಾಗಿದ್ದಾರೆ.
ಗುರುವಾರ ಕಾಲೇಜು ಮುಗಿದ ನಂತರ, ಆರೋಪಿಯು ಸಂತ್ರಸ್ತೆಯನ್ನು ಕಾರಿನಲ್ಲಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಲಾಡ್ಜ್‌ಗೆ ಕರೆದೊಯ್ದಿದ್ದಾನೆ. ಅಲ್ಲಿ ಆರೋಪಿಯು ಆಕೆಗೆ ಬಲವಂತವಾಗಿ ಕುಡಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಕೋಣೆಯಲ್ಲಿ ಇನ್ನೂ ಇಬ್ಬರು ಇದ್ದರು ಮತ್ತು ಅವರ ಪಾತ್ರ ಇನ್ನೂ ಪತ್ತೆಯಾಗಿಲ್ಲ. ಸಂತ್ರಸ್ತೆ ಆಘಾತಕ್ಕೊಳಗಾಗಿರುವುದರಿಂದ ಆಕೆಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಗುರುವಾರ ಸಂಜೆ ಸಂತ್ರಸ್ತೆ ಮನೆಗೆ ಬಾರದ ಕಾರಣ, ಆಕೆಯ ಪೋಷಕರು ಮೊಬೈಲ್ ಫೋನ್‌ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಸ್ವಿಚ್ ಆಫ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೋಷಕರು ಆಕೆಯನ್ನು ಹುಡುಕಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಮತ್ತೆ ಕರೆ ಮಾಡಿದಾಗ, ಆಕೆಯ ಫೋನ್ ಆನ್ ಆಗಿತ್ತು ಮತ್ತು ಆಕೆ ಯಲಹಂಕ ಬಳಿ ಇರುವುದಾಗಿ ಹೇಳಿದ್ದಾಳೆ. ಅವರು ಅಲ್ಲಿಗೆ ತಲುಪಿದಾಗ, ಆಕೆ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ ಮತ್ತು ಆಕೆ ಪೋಷಕರೊಂದಿಗೆ ಘಟನೆಯನ್ನು ಹಂಚಿಕೊಂಡ ನಂತರ ದೂರು ದಾಖಲಿಸಲಾಗಿದೆ.
ಯಲಹಂಕ ಪೊಲೀಸರು ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಈಶಾನ್ಯ) ಸಜೀತ್ ವಿಜೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಮತ್ತು ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲವೊಂದು ತಿಳಿಸಿದೆ.
Advertisement