ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳ ಜಟಾಪಟಿ: ಗೊಂದಲ ಸೃಷ್ಟಿ
ಚಾಮರಾಜನಗರ: ಒಂದು ಹುದ್ದೆಗಾಗಿ ಇಬ್ಬರು ಅಧಿಕಾರಿಗಳು ಜಟಾಪಟಿ ನಡೆಸಿ, ಇಬ್ಬರು ಕೂಡ ಕರ್ತವ್ಯಕ್ಕೆ ಹಾಜರಾದ ಘಟನೆ ಚಾಮರಾಜನಗರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ಕಳೆದ 1 ವಾರದಿಂದ ನಡೆಯುತ್ತಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಹುದ್ದೆಗೆ ಪೈಪೋಟಿ ನಡೆಸಿ, ವರ್ಗಾವಣೆಗೊಂಡು ಬಿಡುಗಡೆ ಆದೇಶ ಪಡೆಯದೇ ಹೆಚ್. ಆರ್. ಸುರೇಶ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೆಲುವರಾಜ್ ಕಚೇರಿಗೆ ಹಾಜರಾಗಿ ಎರಡು ಕುರ್ಚಿಯಲ್ಲಿ ಕುಳಿತಿದ್ದಾರೆ.
5 ತಿಂಗಳ ಹಿಂದಷ್ಟೇ ಚಾಮರಾಜನಗರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾಗಿ ಸುರೇಶ್ ಅವರು ನೇಮಕಗೊಂಡಿದ್ದರು. ಐದು ತಿಂಗಳು ಕಳೆಯುವಷ್ಟರಲ್ಲಿ ಸುರೇಶ್ ಅವರನ್ನು ರಾಜ್ಯ ಸರ್ಕಾರ ಚಾಮರಾಜನಗರದಿಂದ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಈ ನಡುವೆ ಖಾಲಿ ಇರುವ ಉಪ ನಿರ್ದೇಶಕರ ಸ್ಥಾನಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಚೆಲುವರಾಜ್ ಅವರನ್ನು ಪ್ರಭಾರವಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಆದರೆ, ಕರ್ತವ್ಯಕ್ಕೆ ಬಂದು 5 ತಿಂಗಳಷ್ಟೇ ಆಗಿದೆ, ಈ ವರ್ಗಾವಣೆ ನ್ಯಾಯ ಸಮ್ಮತವಲ್ಲ ಎಂದು ಸುರೇಶ್ ಅವರು ಕೆಇಟಿಗೆ ಹೋಗಿ ವರ್ಗಾವಣೆ ಆದೇಶಕ್ಕೆ ಸ್ಟೇ ಕೂಡ ತಂದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ರಶ್ಮಿ ಎಂ.ಎಸ್. ಮಧ್ಯಪ್ರವೇಶಿಸಿ ಚಾಮರಾಜನಗರ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದು, ನ್ಯಾಯಾಲಯದಿಂದ ಅಂತಿಮ ತೀರ್ಪು ಬರುವವರೆಗೆ ಸುರೇಶ್ ಅವರನ್ನು ಉಪ ನಿರ್ದೇಶಕರಾಗಿ ಮುಂದುವರಿಸಲು ಅನುಮತಿಸುವಂತೆ ನಿರ್ದೇಶಿಸಿದ್ದಾರೆ.
ಇಷ್ಟರ ಒಳಗಾಗಿ ಚೆಲುವರಾಜ್ ಸಿಇಒಗೆ ಆದೇಶ ಪ್ರತಿ ನೀಡಿ ಉಪ ನಿರ್ದೇಶಕರಾಗಿ ಸ್ವತಃ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಎರಡೂ ಬೆಳವಣಿಗೆಯಿಂದ ಇಬ್ಬರೂ ಕೂಡ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
ಏತನ್ಮಧ್ಯೆ ಚಾಮರಾಜನಗರ ಜಿಲ್ಲಾ ಪಂಚಾಯತ್ ಸಿಇಒ ಕಚೇರಿ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇವೆಲ್ಲದರ ನಡುವೆ ಅಧಿಕಾರಿಗಳ ಪೈಪೋಟಿ ಸಾರ್ವಜನಿಕ ವಲಯದಲ್ಲಿ ಚರ್ಚೆ ಮತ್ತು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.


