

ಬಾಗಲಕೋಟೆ: ಬಾಗಲಕೋಟೆಯ ಅನಧಿಕೃತ ದಿವ್ಯಜ್ಯೋತಿ ಬುದ್ಧಿಮಾಂದ್ಯ ಶಾಲೆಯಲ್ಲಿ ಶಿಕ್ಷಕ ದಂಪತಿ ಬುದ್ಧಿಮಾಂದ್ಯನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ವೀಡಿಯೋ ವೈರಲ್ ಆದ ಬೆನ್ನಲ್ಲೇ ಘಟನೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಮುಧೋಳ ತಾಲೂಕಿನ ಮಂಟೂರು ಗ್ರಾಮದ 16 ವರ್ಷದ ಬಾಲಕ ಹಲ್ಲೆಗೊಳಗಾದ ಬುದ್ಧಿಮಾಂದ್ಯ. ಅನಧಿಕೃತ ಶಾಲೆಯ ಮುಖ್ಯಶಿಕ್ಷಕ ಅಕ್ಷಯ ಇಂದುಲ್ಕರ್ ಹಾಗೂ ಶಿಕ್ಷಕಿ ಮಾಲಿನಿ ದಂಪತಿ ಬಾಲಕನ ಕಣ್ಣಿಗೆ ಕಾರದಪುಡಿ ಎರಚಿ, ಬೆಲ್ಟ್ ಮತ್ತು ಪ್ಲಾಸ್ಟಿಕ್ ಪೈಪ್‌ನಿಂದ ಮನಬಂದಂತೆ ಹಲ್ಲೆ ನಡೆಸಿದ್ದು, ಆತ ನೆಲಕ್ಕೆ ಬಿದ್ದು ಹೊರಳಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆ ಬೆನ್ನಲ್ಲೇ ಶಿಕ್ಷಕರ ವಿರುದ್ಧ ಪಾಲಕರು ತೀವ್ರ ಆಕ್ರೋಶ ಹೊರಹಾಕಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡ ನವನಗರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಹಲ್ಲೆಕೋರ ಪತಿ-ಪತ್ನಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಶಾಲೆ ಬಂದ್'ಗೆ ತಾಯಿ ಆಗ್ರಹ
ಶಿಕ್ಷಕರು ನನ್ನ ಮಗನ ಮೇಲೆ ಹಲ್ಲೆ ನಡೆಸುವುದನ್ನು ನೋಡಿ ಆಘಾತವಾಯಿತು. ಮಕ್ಕಳ ಸುರಕ್ಷತೆಗಾಗಿ ಸರ್ಕಾರ ಕೂಡಲೇ ಶಾಲೆಯನ್ನು ಬಂದ್ ಮಾಡಬೇಕೆಂದು ಬಾಲಕನ ತಾಯಿ ಪಾರ್ವತಿ ರಾಥೋಡ್ ಅವರು ಹೇಳಿದ್ದಾರೆ.
ಮಗುವಿನ ಪೋಷಕರು ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಎನ್‌ಜಿಒ ಅಡಿಯಲ್ಲಿ ಶಾಲೆಯನ್ನು ನಡೆಸಲಾಗುತ್ತಿತ್ತು. ಇದೀಗ ದಂಪತಿ ಶಿಕ್ಷಕರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಹೇಳಿದ್ದಾರೆ.
ಏತನ್ಮಧ್ಯೆ ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಅಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಶಾಲೆ ಕಾನೂನುಬದ್ಧ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಮಹಿಳಾ ಮತ್ತು ಬಾಲಕ ಅಭಿವೃದ್ಧಿ ಇಲಾಖೆ ಶಾಲೆಯನ್ನು ಮುಚ್ಚಲು ಕ್ರಮ ಆರಂಭಿಸಿದೆ. ಜಿಲ್ಲೆ ಆಡಳಿತವು ಮಕ್ಕಳನ್ನು ಸುರಕ್ಷಿತ ವಾತಾವರಣ ಇರುವ ಇತರೆ ಸಂಸ್ಥೆಗಳಿಗೆ ಸ್ಥಳಾಂತರ ಮಾಡುತ್ತಿದೆ ಎಂದು ಅಧಿಕಾಲಿಗಳು ಹೇಳಿದ್ದಾರೆ.
Advertisement