

ನವದೆಹಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭೇಟಿಯಾದ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ನಗರದ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಕೇಂದ್ರ ಸರ್ಕಾರದ ತ್ವರಿತ ಅನುಮೋದನೆ ಮನವಿ ಮಾಡಿದರು.
ಮುಖ್ಯವಾಗಿ ನಮ್ಮ ಮೆಟ್ರೋ 2ನೇ ಹಂತದ ಪರಿಷ್ಕೃತ ದರಕ್ಕೆ ಒಪ್ಪಿಗೆ. ಮೆಟ್ರೋ - 3ನೇ 'ಎ' ಹಂತಕ್ಕೆ ಅಗತ್ಯ ಅನುಮೋದನೆ, ಆರ್‌ಆರ್‌ಟಿಎಸ್ ಯೋಜನೆಗೆ ಬೆಂಬಲ.ಮಿಟ್ಟಗಾನಹಳ್ಳಿ ಕೆರೆ ಬಳಿ ನಾನಾ ಹಂತದ ತ್ಯಾಜ್ಯ ವಿಲೇವಾರಿಗೆ ಅನುಮತಿ ಸೇರಿದಂತೆ ಬೆಂಗಳೂರಿನ ಅಭಿವೃದ್ಧಿಗೆ ಅಗತ್ಯವಾಗಿರುವ ಯೋಜನೆಗಳಿಗೆ ಅನುಮೋದನೆ ಹಾಗೂ ಬೆಂಬಲ ನೀಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮನವಿ ಸಲ್ಲಿಸಿದರು.
ಈ ಕುರಿತು ಕೇಂದ್ರ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಪತ್ರದಲ್ಲಿ, ರಾಜ್ಯ ಸರ್ಕಾರದಿಂದ ಈಗಾಗಲೇ ಕಳುಹಿಸಲಾಗಿರುವ ಪ್ರಸ್ತಾವನೆಗಳಿಗೆ ತ್ವರಿತ ಅನುಮೋದನೆ ಅಗತ್ಯವಿದೆ. ಬೆಂಗಳೂರಿನ ನಗರ ರೂಪಾಂತರ ಪ್ರಕ್ರಿಯೆ ನಿರಂತರವಾಗಿ ಸಾಗಲು ಕೇಂದ್ರದ ಸಮಯೋಚಿತ ಅನುಮೋದನೆ ಅತ್ಯಂತ ಮುಖ್ಯವೆಂದು ಅವರು ಹೇಳಿದ್ದಾರೆ.
ಬಾಕಿ ಇರುವ ಪ್ರಮುಖ ಪ್ರಸ್ತಾವನೆಗಳಲ್ಲಿ ಬೆಂಗಳೂರು ಮೆಟ್ರೋ ಯೋಜನೆಯ ಹಂತ–2ರ ಪರಿಷ್ಕೃತ ಪೂರ್ಣಗೊಳಿಸುವ ವೆಚ್ಚ (ಆರ್‌ಸಿಸಿ) ಪ್ರಮುಖವಾಗಿದೆ. ಈ ಯೋಜನೆಯ ಅಂದಾಜು ವೆಚ್ಚವು ರೂ.26,405.14 ಕೋಟಿಯಿಂದ ರೂ.40,425.02 ಕೋಟಿಗೆ ಏರಿಕೆಯಾಗಿದೆ. ಈ ಪರಿಷ್ಕೃತ ವೆಚ್ಚಕ್ಕೆ ರಾಜ್ಯ ಸರ್ಕಾರವು 2025ರ ಜೂನ್ 5ರಂದು ಅನುಮೋದನೆ ನೀಡಿದ್ದು, ಜೂನ್ 9ರಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಇದಕ್ಕೆ ಕೇಂದ್ರದ ಶೀಘ್ರ ಅನುಮೋದನೆ ಕೋರಿ ಉಪಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.
ಅಲ್ಲದೆ, ಸರ್ಜಾಪುರ–ಹೆಬ್ಬಾಳ ಸಂಪರ್ಕ ಕಲ್ಪಿಸುವ 36.59 ಕಿ.ಮೀ ಉದ್ದದ ಬೆಂಗಳೂರು ಮೆಟ್ರೋ ಹಂತ–3ಎ ಯೋಜನೆಗೂ ಅನುಮೋದನೆ ನೀಡುವಂತೆ ಕೋರಿದ್ದಾರೆ.
ಈ ಮಾರ್ಗದಲ್ಲಿ ಮೇಲ್ಸೇತುವೆ ಮತ್ತು ಸುರಂಗ ಸೇರಿ ಒಟ್ಟು 28 ನಿಲ್ದಾಣಗಳು ಇರಲಿದ್ದು, ಯೋಜನೆಯ ಅಂದಾಜು ವೆಚ್ಚ ರೂ.28,405 ಕೋಟಿ ಆಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರದ ಅಂತಿಮ ಒಪ್ಪಿಗೆ ಇನ್ನೂ ಬಾಕಿಯಿದೆ.
ಪರಿಶೀಲನಾ ಪ್ರಕ್ರಿಯೆಯ ಭಾಗವಾಗಿ, ಸುರಂಗ ಮಾರ್ಗದ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಿಸ್ಟ್ರಾ (SYSTRA) ಸಲಹಾ ಸಂಸ್ಥೆಯನ್ನು ನೇಮಿಸಲಾಗಿದ್ದು, ಈ ಕುರಿತು ಕೇಂದ್ರ ಸಚಿವಾಲಯದೊಂದಿಗೆ ಚರ್ಚೆಗಳು ನಡೆಯುತ್ತಿವೆ. ಇದಲ್ಲದೆ, ಬೆಂಗಳೂರು ಪ್ರದೇಶಕ್ಕೆ ಪ್ರಸ್ತಾವಿತ ಪ್ರಾದೇಶಿಕ ವೇಗದ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಹಾಗೂ ಮಿಟ್ಟಗಾನಹಳ್ಳಿ ಕೆರೆ ಬಳಿ ನಾನಾ ಹಂತದ ತ್ಯಾಜ್ಯ ವಿಲೇವಾರಿಗೆ ಕೇಂದ್ರದ ಬೆಂಬಲ ಮತ್ತು ಅನುಮೋದನೆಯನ್ನು ಕೋರಿದ್ದಾರೆ.
ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು, ಪ್ರಾದೇಶಿಕ ಸಂಪರ್ಕ ಸುಧಾರಿಸಲು ಮತ್ತು ಪರಿಸರ ಸಂಬಂಧಿತ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಈ ಯೋಜನೆಗಳು ಅತ್ಯಂತ ಅಗತ್ಯವೆಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
Advertisement