

ಚಿತ್ರದುರ್ಗ: ಖಾಸಗಿ ಟ್ರಾವೆಲ್ ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು, 11ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಹಿರಿಯೂರಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.
ಖಾಸಗಿ ಸ್ಲೀಪರ್ ಕೋಚ್ ಬಸ್ ಬೆಂಗಳೂರಿನಿಂದ ಶಿವಮೊಗ್ಗದ ಮೂಲಕ ಗೋಕರ್ಣಕ್ಕೆ ಹೊರಟಿತ್ತು. ಈ ನಡುವೆ ಚಿತ್ರದುರ್ಗದ ಹಿರಿಯೂರಿನ ಜವನಗೊಂಡನಹಳ್ಳಿ ಎಂಬಲ್ಲಿ ದುರ್ಘಟನೆ ಸಂಭವಿಸಿದೆ.
ಡಿಕ್ಕಿ ಬಳಿಕ ಕಂಟೇನರ್ ಲಾರಿ ಹಾಗೂ ಬಸ್ ಎರಡೂ ಬೆಂಕಿ ಹೊತ್ತಿಕೊಂಡಿದ್ದು, ಬಸ್ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ.
ದುರಂತದಲ್ಲಿ 11 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಲಾರಿ ಚಾಲಕ ಕೂಡ ಸಜೀವ ದಹನವಾಗಿದ್ದಾನೆ. ಬಸ್ನಲ್ಲಿ ಸುಮಾರು 32 ಮಂದಿ ಪ್ರಯಾಣಿಕರು ಇದ್ದರು ಎಂದು ವರದಿಗಳಿಂದ ತಿಳಿದುಬಂದಿದೆ.
ಉಳಿದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಈ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಒಂದು ಕಡೆಯಿಂದ ಬರುತ್ತಿದ್ದ ಲಾರಿಯೊಂದು ಡಿವೈಡರ್ ಹಾರಿ ಮತ್ತೊಂದು ಕಡೆಯಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಲೀಪರ್ ಕೋಚ್ ಬಸ್ ರಸ್ತೆ ಮಧ್ಯೆ ಹೊತ್ತಿ ಉರಿದಿದೆ. ಲಾರಿ ಹಿರಿಯೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು, ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ.
ಬಸ್ಸಿನಲ್ಲಿ 15 ಮಹಿಳೆಯರು, 14 ಪುರುಷರು ಪ್ರಯಾಣಿಸುತ್ತಿದ್ದರು. ಒಟ್ಟು 32 ಸೀಟ್ಗಳ ಬಸ್ನಲ್ಲಿ 29 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.
ಘಟನೆಯಲ್ಲಿ ಬಸ್ ಚಾಲಕ, ನಿರ್ವಾಹಕ ಮತ್ತು ಕೆಲವರು ಬಸ್ ನಿಂದ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಕಂಟೇನರ್ ಲಾರಿ ಚಾಲಕ ಕುಲದೀಪ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಅಪಘಾತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸುಮಾರು 30 ಕಿ.ಮೀ. ದೂರದ ವರೆಗೆ ಟ್ರಾಫಿಕ್ ಜಾಮ್ ಆಗಿದ್ದು, ಶಿರಾವರೆಗೂ ಕಿಲೋ ಮೀಟರ್ಗಟ್ಟಲೇ ವಾಹನಗಳು ನಿಂತಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಘಟನೆ ಕುರಿತು ಐಜಿಪಿ ರವಿಕಾಂತೇಗೌಡ ಅವರು ಪ್ರತಿಕ್ರಿಯೆ ನೀಡಿದ್ದು, ಬಸ್ಸಿನಿಂದ 7 ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಓರ್ವ ಲಾರಿ ಚಾಲಕ ಸೇರಿ ಸದ್ಯದ ಮಾಹಿತಿ ಪ್ರಕಾರ 9 ಜನ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಶಿರಾ ಹಾಗೂ ಹಿರಿಯೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಗಿದೆ. ಬೆಂಗಳೂರಿನಿಂದ ಡಿಎನ್‌ಎ ಅಂಡ್ ಸುಕೋ ಟೀಂ ಬಂದಿದೆ ಎಂದು ಹೇಳಿದ್ದಾರೆ.
ಸೀಬರ್ಡ್ ಬಸ್ಸಿನಲ್ಲಿದ್ದ 21 ಜನರು ಪತ್ತೆಯಾಗಿದ್ದು 11 ಜನರು ಪತ್ತೆಯಾಗಿಲ್ಲ. ಪತ್ತೆಯಾಗಿರುವವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದೇವೆ. ಈ ಪೈಕಿ ಆರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement