

ಬೆಂಗಳೂರು: ಹೊಸ ವರ್ಷದ ಸ್ವಾಗತಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದ್ದು, ಈ ನಡುವೆ ಶಾಂತಿ ಮತ್ತು ಸುರಕ್ಷತೆ ಕಾಪಾಡಲು ಬೆಂಗಳೂರು ನಗರ ಪೊಲೀಸ್ ಸಿದ್ಧತೆ ನಡೆಸುತ್ತಿದ್ದಾರೆ.
ನಗರಾದ್ಯಂತ ಜಾರಿಗೊಳಿಸಿರುವ ಭದ್ರತಾ ಕ್ರಮಗಳನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಗುರುವಾಪ ಖುದ್ದು ಪರಿಶೀಲನೆ ನಡೆಸಿದ್ದಾರೆ.
ಸಿಸಿಟಿವಿ ಮತ್ತು ಲೈವ್ ಮಾನಿಟರಿಂಗ್ ವ್ಯವಸ್ಥೆ, AI ಆಧಾರಿತ ಜನಸಂಚಾರ ವಿಶ್ಲೇಷಣಾ ಸಾಧನಗಳು, ಬ್ಯಾರಿಕೇಡ್‌ಗಳು ಮತ್ತು ಪ್ರವೇಶ ನಿಯಂತ್ರಣ, ತುರ್ತು ಪ್ರತಿಕ್ರಿಯೆ ಮತ್ತು ಭದ್ರತಾ ಪ್ರೋಟೋಕಾಲ್‌ಗಳನ್ನು ಆಯುಕ್ತರು ಪರಿಶೀಲಿಸಿದ್ದಾರೆ.
ನಂತರ ಮಾತನಾಡಿದ ಸೀಮಂತ್ ಕುಮಾರ್ ಅವರು, ಜನಸಂಚಾರವನ್ನು ವಾಸ್ತವವಾಗಿ ಅರ್ಥಮಾಡಿಕೊಳ್ಳಲು ಕ್ರಿಸ್ ಮಸ್ ಹಬ್ಬದ ದಿನದಂದು ಭೇಟಿ ನೀಡಲಾಗಿದೆ. ಹೊಸ ವರ್ಷದ ದಿನದ ಭದ್ರತೆಗೆ ನಾಗರಿಕರೂ ಕೂಡ ಪೊಲೀಸರಿಗೆ ಸಹಕಾರ ನೀಡಬೇಕು. ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸಿ, ಸುರಕ್ಷಿತವಾಗಿ ಹೊಸ ವರ್ಷವನ್ನು ಆಚರಿಸಬೇಕೆಂದು ಹೇಳಿದರು.
ಪೊಲೀಸರು ಈಗಾಗಲೇ ತಯಾರಿಗಳನ್ನು ನಡೆಸಿದ್ದಾರೆ. ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ, ಅವುಗಳು ಸಮರ್ಥವಾಗಿವೆ ಎಂದು ವಿಶ್ಲೇಷಣೆ ಮಾಡುತ್ತಿದ್ದೇವೆ. ಯಾವುದೇ ಹೆಚ್ಚುವರಿ ಅಗತ್ಯಗಳು ಇದ್ದರೆ ಅವುಗಳನ್ನು ಗಮನಿಸುತ್ತೇವೆ. ಮಹಿಳೆಯರ ಭದ್ರತೆ, ಜನಸಂಚಾರ ಮತ್ತು ಟ್ರಾಫಿಕ್ ನಿಯಂತ್ರಣ ಆದ್ಯತೆಯಾಗಿದ್ದು, ನಗರವನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳುವುದೇ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
Advertisement