

ಗೋಕರ್ಣ (ಉತ್ತರ ಕನ್ನಡ): ಕ್ಷುಲ್ಲಕ ವಿಚಾರಕ್ಕೆ ಅಮೆರಿಕಾ ಪ್ರಜೆ ಮೇಲೆ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಗೋಕರ್ಣ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಚಾರ್ಲ್ಸ್ ಮಾರ್ಟಿನ್ ವೈಟ್ (44) ಎಂಬ ಅಮೆರಿಕಾ ಪ್ರಜೆ ನೀಡಿದ ದೂರಿನ ಮೇರೆಗೆ ಪಾಂಡು ಹಾಗೂ ನಿತೀಶ್ ಎಬುವವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಅಮೆರಿಕಾ ಪ್ರಜೆ ಗೋಕರ್ಣದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸವಿದ್ದು, ನೆರೆಹೊರೆಯವರಾಗಿರುವ ನಿತೀಶ್ ಹಾಗೂ ಪಾಂಡು ಜೊತೆಗೆ ಸಂಗೀತ ವಿಚಾರಕ್ಕೆ ಜಗಳವಾಗಿದೆ. ಈ ವೇಳೆ ನಡೆದ ಮಾತುಕತೆ ವೇಳೆ ನಿತೀಶ್ ಹಾಗೂ ಪಾಂಡು ಮಾರ್ಟಿನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಡಿಸೆಂಬರ್ 20 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೊಡ್ಡಶಬ್ಧದಲ್ಲಿ ಹಾಡನ್ನು ಹಾಕಿದ್ದರು. ಇದರಿಂದ ಎಚ್ಚರಕೊಂಡಿದ್ದೆ. ಬಳಿಕ ನಾನು ಕೂಡ ಸಂಗೀತ ಹಾಕಿದ್ದೆ. ಸ್ವಲ್ಪ ಸಮಯದ ಬಳಿಕ ಕೆಲವರು ಬಾಗಿಲು ಬಡಿದು, ಸಂಗೀತ ನಿಲ್ಲಿಸುವಂತೆ ಹೇಳಿದರು. ಈ ವೇಳೆ ಅವರಿಗೂ ನಿಲ್ಲಿಸುವಂತೆ ಹೇಳಿದಾಗ, ಓರ್ವ ವ್ಯಕ್ತಿ ನನ್ನ ಮೇಲೆ ಹಲ್ಲೆ ನಡೆಸಿದ. ಇಟ್ಟಿಗೆಯಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ನನ್ನ ಕೆನ್ನೆಯ ಮೂಳೆಯಲ್ಲಿ ಬಿರುಕು ಮೂಡಿದ್ದು, ಕಣ್ಣು ಊದಿಕೊಂಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಮೆರಿಕಾ ವ್ಯಕ್ತಿ ಕಲಾವಿದ ಹಾಗೂ ಸಂಗೀತಗಾರನಾಗಿದ್ದು, ನವೆಂಬರ್ 30ರಂದು ಗೋಕರ್ಣಕ್ಕೆ ಬಂದಿದ್ದಾನೆ. ಸ್ಥಳದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು, ತಂಗಿದ್ದಾರೆ. ಸ್ಥಳೀಯರು ಬಾಡಿಗೆಯಾಗಿ 4,000 ಪಾವತಿಸಿದರೆ, ಈ ವ್ಯಕ್ತಿ 8,000 ಪಾವತಿಸುತ್ತಿದ್ದಾರೆಂದು ಗೋಕರ್ಣ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಧರ್ ಅವರು ಹೇಳಿದ್ದಾರೆ.
Advertisement