
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರು ಗ್ರಾಮದ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಮಹಾಂತೇಶ್ ಹೊನಕಟ್ಟಿ (35ವ), ಬೆಳಗಾವಿ ಜಿಲ್ಲೆಯ ಅರಬಾವಿ ನಿವಾಸಿ ಭೀಮಪ್ಪ ಗಂಟೆಣ್ಣವರ (42ವ), ಜಮಖಂಡಿ ತಾಲ್ಲೂಕಿನ ಜಂಬಗಿ ಬಿಕೆ ಗ್ರಾಮದ ನಿವಾಸಿ ಆನಂದ ಬಾಡಗಿ (22ವ) ಎಂದು ಗುರುತಿಸಲಾಗಿದೆ.
ಇಂದು ನಸುಕಿನ ಜಾವ ಜಮಖಂಡಿಯಿಂದ ವಿಜಯಪುರಕ್ಕೆ ಟಾಟಾ ಏಸ್ ವಾಹನ ಹೊರಟಿತ್ತು. ಕಾರು ವಿಜಯಪುರದಿಂದ ಜಮಖಂಡಿಗೆ ಬರುತ್ತಿತ್ತು. ಕಾರು ಜಾಗೂ ಟಾಟಾ ಏಸ್ ವಾಹನ ಪರಸ್ಪರ ಡಿಕ್ಕಿಯಾಗಿವೆ. ಟಾಟಾ ಏಸ್ ವಾಹನಕ್ಕೆ ಹಿಂಬದಿಯಿದ್ದ ಎರಡು ಬೈಕಗಳು ಡಿಕ್ಕಿ ಹೊಡೆದಿವೆ. ಸ್ಥಳಕ್ಕೆ ಜಮಖಂಡಿ ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್ಐ ಗಂಗಾಧರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಾವಗಡದಲ್ಲಿ ಅಪಘಾತ
ಸೆಂಟ್ರಿಂಗ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ 407 ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 10ಕ್ಕೂ ಅಧಿಕ ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ಬಗುಡೂರು ಗ್ರಾಮದ ತಿರುವಿನಲ್ಲಿ ಸಂಭವಿಸಿದೆ.
ಘಟನೆಯಲ್ಲಿ ತಿಪ್ಪ ನಾಯಕ್ (55 ವ) ಎಂಬುವವರ ಕೈ ನಜ್ಜುಗುಜ್ಜಾಗಿದೆ. ಲಕ್ಷ್ಮಮ್ಮ, ಅರುಣಾ, ಕಾವೇರಿ, ಶಾಂತಮ್ಮ, ಶಾಂತಾಬಾಯಿ, ಪ್ರಕಾಶ್, ದೇವಿ ಬಾಯಿ, ಸಕ್ಕಬಾಯಿ ಎಂಬುವವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಕೆಲವರನ್ನು ಬೆಂಗಳೂರಿಗೆ ರವಾನಿಸಲಾಗಿದೆ.
ಎನ್ ಹೊಸಹಳ್ಳಿ ತಾಂಡ ಗ್ರಾಮದ ಲಂಬಾಣಿ ಸಮುದಾಯದ ಕಾರ್ಮಿಕರು ಸೆಂಟ್ರಿಂಗ್ ಕೆಲಸಕ್ಕೆ ತಿರುಮಣಿ ಭಾಗಕ್ಕೆ ಹೋಗಿದ್ದರು. ಕೆಲಸ ಮುಗಿಸಿ ವಾಪಸ್ ಬರುವಾಗ ಬುಗುಡೂರು ಸಮೀಪ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪಾವಗಡ ವೃತ್ತ ನಿರೀಕ್ಷಕ ಸುರೇಶ್, ಗ್ರಾಮಾಂತರ ವೃತ್ತ ನಿರೀಕ್ಷಕ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿರುಮಣಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement