
ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕುವ ಸುಗ್ರೀವಾಜ್ಞೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು 2-3 ದಿನಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಶುಕ್ರವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರಿಗೆ ನೀಡುತ್ತಿರುವ ಕಿರುಕುಳಕ್ಕೆ ಕಡಿವಾಣ ಹಾಕರು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಎಲ್ಲ ಜಿಲ್ಲಾಧಿಕಾರಿ ಮತ್ತು ಎಸ್ಪಿಗಳಿಗೆ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ ಮತ್ತು ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಲು ಕೂಡ ಸರ್ಕಾರ ಸಿದ್ಧವಾಗಿದೆ. ಅದರ ಕರಡನ್ನು ತಯಾರು ಮಾಡಲು ಸಭೆಯೊಂದನ್ನು ಕರೆಯಲಾಗಿದ್ದು, ಕರಡು ಸಿದ್ಧಗೊಂಡ ಕೂಡಲೇ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳಿಸಲಾಗುವುದು ಎಂದು ತಿಳಿಸಿದರು.
ಕೊರಟಗೆರೆ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬರು ಮೈಕ್ರೋ ಫೈನಾನ್ಸ್ ಮೂಲಕ 2.50 ಲಕ್ಷ ರೂ. ಸಾಲ ತೆಗೆದುಕೊಂಡಿದ್ದಾರೆ. ಅದಕ್ಕೆ 4.50 ಲಕ್ಷ ರೂ. ಚಕ್ರಬಡ್ಡಿ ರೂಪದಲ್ಲಿ ವಾಪಸ್ ಪಾವತಿಸಿದ್ದಾರೆ. ಆದರೂ ಹೆಚ್ಚುವರಿ 80 ಸಾವಿರ ರೂ. ಪಾವತಿಸಬೇಕೆಂದು ಮನೆಗಳಿಗೆ ಬೀಗ ಜಡಿದು, ನೋಟಿಸ್ ಅಂಟಿಸಿದ್ದಾರೆ. ಇದಾದ ಬಳಿಕ ಕುಟುಂಬಸ್ಥರು ಊರು ಬಿಟ್ಟು ಹೋಗಿದ್ದರು. ಈ ಪ್ರಕರಣ ಗಮನಕ್ಕೆ ಬಂದ ಬೆನ್ನಲ್ಲೇ ತಪ್ಪಿತಸ್ಥರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಮನೆ ಬಿಟ್ಟು ಹೋಗಿದ್ದವರನ್ನು ಮತ್ತೆ ವಾಪಸ್ ಕರೆತರಲಾಗಿದೆ.
ಮೈಕ್ರೋ ಫೈನಾನ್ಸ್ ವ್ಯಹವಾರ ಬೇರೆ ವಿಚಾರ. ಆದರೆ, ರಾಜ್ಯದಲ್ಲಿ 59 ಸಾವಿರ ಕೋಟಿ ರೂ. ಸಾಲ ಕೊಟ್ಟಿರುವುದು ಇದೆ. ಅದರ ಬಗ್ಗೆ ಹೆಚ್ಚು ಒತ್ತು ನೀಡಲು ಹೋಗಿಲ್ಲ. ಕೂಡಲೇ ಕಾನೂನು ತಂದು ದೌರ್ಜನ್ಯ ತಡೆಯಬೇಕಿದೆ. ಎಂಎಫ್ಐಗಳು ಕೋರ್ಟ್‍ಗೆ ಹೋಗುತ್ತಾರೆ ಎಂಬುದು ಗಮನಕ್ಕೆ ಇದೆ. ಅವರು ಕೋರ್ಟ್‍ಗೆ ಹೋಗದಿರುವಂತಹ ಕಾನೂನು ಮಾಡಬೇಕಲ್ಲವೆ. ಇದನ್ನು ಕೂಡ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದರು.
Advertisement