ಉಚಿತ ವಿದ್ಯುತ್, ಬೃಹತ್ ಪ್ರೋತ್ಸಾಹದ ಹೊರತಾಗಿಯೂ 'ರೂಫ್ ಟಾಪ್ ಸೋಲಾರ್' ಯೋಜನೆಗೆ ಬೆಂಗಳೂರಿಗರ ನಿರ್ಲಕ್ಷ್ಯ!

ಬೆಂಗಳೂರಿನ ಬೆಸ್ಕಾಮ್ ಸಂಪರ್ಕ ಹೊಂದಿರುವ 92 ಲಕ್ಷ ಮನೆಗಳ ಪೈಕಿ ಕೇವಲ 68,000 ಮನೆಗಳು ಮಾತ್ರ ಸೌರಶಕ್ತಿಯನ್ನು ಬಳಸಿಕೊಂಡಿವೆ ಎಂದು ತಿಳಿದುಬಂದಿದೆ.
rooftop solar adoption
ರೂಫ್ ಟಾಪ್ ಸೋಲಾರ್
Updated on

ಬೆಂಗಳೂರು: ವಿದ್ಯುತ್ ಬಿಲ್‌ಗಳನ್ನು ಉಳಿಸುವ ಮತ್ತು ಪರಿಸರಕ್ಕೆ ಪ್ರಯೋಜನಗಳನ್ನು ನೀಡುವ ಸಲುವಾಗಿ ಜಾರಿಯಾಗಿರುವ 'ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ' ನೀಡುವ ಬೃಹತ್ ಪ್ರೋತ್ಸಾಹದ ಹೊರತಾಗಿಯೂ, ಬೆಂಗಳೂರಿಗರು ಯೋಜನೆ ನಿರ್ಲಕ್ಷ್ಯ ತೋರಿದ್ದಾರೆ.

ಈ ಕುರಿತಂತೆ ಬೆಂಗಳೂರಿನ ಅಂಕಿ ಅಂಶಗಳು ಯೋಜನೆ ಕುರಿತ ಮಹಾನಗರಿ ಜನತೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ. ಬೆಂಗಳೂರಿನ ಬೆಸ್ಕಾಮ್ ಸಂಪರ್ಕ ಹೊಂದಿರುವ 92 ಲಕ್ಷ ಮನೆಗಳ ಪೈಕಿ ಕೇವಲ 68,000 ಮನೆಗಳು ಮಾತ್ರ ಸೌರಶಕ್ತಿಯನ್ನು ಬಳಸಿಕೊಂಡಿವೆ ಎಂದು ತಿಳಿದುಬಂದಿದೆ.

ಈ ನಿಟ್ಟಿನಲ್ಲಿ ಯೋಜನೆಯನ್ನು ಪ್ರಚುರ ಮಾಡುವ ಸಲುವಾಗಿ ಹೊರಮಾವುವಿನ ನಿವಾಸಿಗಳ ಸಂಘವು ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಮನೆಗಳು ಯೋಜನೆಯ ಪ್ರಯೋಜನಗಳನ್ನು ಅರ್ಥಮಾಡಿಸಲು ಮತ್ತು ಯೋಜನೆ ಅಳವಡಿಸಿಕೊಳ್ಳುವಂತೆ ನಿವಾಸಿಗಳನ್ನು ಒಪ್ಪಿಸಲು ಮುಂದಾಳತ್ವ ವಹಿಸಿದೆ. ಇದರ ಯಶಸ್ಸು ಈಗ ಇತರ ಅನೇಕ RWA ಗಳನ್ನು ಇದನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿದೆ.

ಟ್ರಿನಿಟಿ ಎನ್‌ಕ್ಲೇವ್ ಲೇಔಟ್‌ನಲ್ಲಿರುವ 250 ಮನೆಗಳಲ್ಲಿ, 25 ಮನೆಗಳು ಮೊದಲ ಬ್ಯಾಚ್‌ನಲ್ಲಿ ರೂಫ್‌ಟಾಪ್ ಸೋಲಾರ್ ಅನ್ನು ಅಳವಡಿಸಿಕೊಂಡಿವೆ. ಉಳಿದ ಮನೆ ಮಾಲೀಕರು ನಂತರದ ಬ್ಯಾಚ್‌ಗಳಲ್ಲಿ ಸೋಲಾರ್ ಯೋಜನೆ ಹೊಂದಲು ಸಹಿ ಹಾಕಿವೆ.

ಟ್ರಿನಿಟಿ ಎನ್‌ಕ್ಲೇವ್ ನಿವಾಸಿಗಳ ಸಂಘ (TERA)ದ ಅಧ್ಯಕ್ಷ ಜಿ ಕೊಚ್ಚು ಶಂಕರ್ ಅವರು TNIE ಜೊತೆ ಈ ಬಗ್ಗೆ ಮಾತನಾಡಿದ್ದು, “ಈ ಸೌರ ಯೋಜನೆಯಿಂದ ಸಾಕಷ್ಟು ಅನುಕೂಲಗಳಿದ್ದು, ಒಂದು ಕುಟುಂಬವು ಈ ಯೋಜನೆ ನೀಡುವ ಪ್ರೋತ್ಸಾಹಕಗಳನ್ನು ಅರ್ಥಮಾಡಿಕೊಂಡು ಅದನ್ನು ಅಳವಡಿಸಿಕೊಂಡರೆ ಇದಕ್ಕೆ ಸರಿ ಸುಮಾರು ಕೇವಲ 10,000 ರೂ.ಗಳು ಮಾತ್ರ ಖರ್ಚಾಗುತ್ತದೆ. ಸಾಲದ ಆರಂಭಿಕ ಮರುಪಾವತಿ ಅವಧಿ ಮುಗಿದ ನಂತರ ಎರಡು ದಶಕಗಳವರೆಗೆ ಉಚಿತ ವಿದ್ಯುತ್ ಲಭ್ಯವಿರುತ್ತದೆ. ನಗರದಲ್ಲಿ ಸರಾಸರಿ ನಾಲ್ಕು ಸದಸ್ಯರ ಕುಟುಂಬವು ಮೂಲ ವಿದ್ಯುತ್ ಉಪಕರಣಗಳನ್ನು ಹೊಂದಿದ್ದರೆ ತಿಂಗಳಿಗೆ 350 ಯೂನಿಟ್ ವಿದ್ಯುತ್ ಬಳಸುತ್ತದೆ. ಅದು ರೂ. 2,000 ರಿಂದ ರೂ. 2,500 ರವರೆಗಿನ ಬಿಲ್ ಅನ್ನು ಪಾವತಿಸಬೇಕಾಗುತ್ತದೆ.

rooftop solar adoption
ಸೂರ್ಯ ಘರ್ ಯೋಜನೆ: 2027 ರೊಳಗೆ 1 ಕೋಟಿ ಸೋಲಾರ್ ಪ್ಯಾನೆಲ್ ಸ್ಥಾಪನೆಯ ಗುರಿ

ಆದರೆ ಅವರು ತಮ್ಮ ಮನೆಯ ಮೇಲೆ 1.8 ಲಕ್ಷ ರೂ. ವೆಚ್ಚದ 3 KW ನ ಮೇಲ್ಛಾವಣಿಯ ಸೌರಶಕ್ತಿಯನ್ನು ಅಳವಡಿಸಿಕೊಂಡರೆ, ಯೋಜನೆಯಡಿಯಲ್ಲಿ ರೂ. 78,000 ಮೊತ್ತವನ್ನು ಸಬ್ಸಿಡಿಯಾಗಿ ಮರುಪಾವತಿಸಲಾಗುತ್ತದೆ. ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಶೇ.7% ಬಡ್ಡಿಯಲ್ಲಿ ಸಬ್ಸಿಡಿ ಸಾಲಗಳನ್ನು ನೀಡುತ್ತವೆ, ಇದನ್ನು ಹತ್ತು ವರ್ಷಗಳಲ್ಲಿ ಮರುಪಾವತಿಸಬಹುದು. ಮಾಸಿಕ ಇಎಂಐ ಸಾಲ ಸೌಲಭ್ಯ ಕೂಡ ಇರುತ್ತದೆ. ಇದರಿಂದ ಅದು ನಿಯಮಿತ ಮಾಸಿಕ ಬಿಲ್‌ಗಳಿಗೆ ಸಮನಾಗಿರುತ್ತದೆ. ಸಾಲವನ್ನು 4-5 ವರ್ಷಗಳಲ್ಲಿ ಪೂರ್ಣಗೊಳಿಸಬಹುದಾಗಿದೆ. ಮುಂದಿನ 20 ವರ್ಷಗಳವರೆಗೆ, ಮನೆಯವರು ಸೌರಶಕ್ತಿಯ ಮೂಲಕ ತಮ್ಮ ಮನೆಗೆ ಬೇಕಾದ ವಿದ್ಯುತ್ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಇದಕ್ಕಾಗಿ ಯಾವುದೇ ವಿದ್ಯುತ್ ಬಿಲ್‌ಗಳು ಇರುವುದಿಲ್ಲ ಎಂದು ಅವರು ಹೇಳಿದರು.

ಹೊರಮಾವಿನಲ್ಲಿ ನಾಲ್ಕು ಆರ್‌ಡಬ್ಲ್ಯೂಎಗಳು ಮತ್ತು ಬೆಂಗಳೂರಿನ ಇತರ ಪ್ರದೇಶಗಳಿಂದ ಆರು ಇತರ ಸಂಘಗಳು ಟೆರಾದಿಂದ ಮಾರ್ಗದರ್ಶನ ಮತ್ತು ಬೆಂಬಲವನ್ನು ಪಡೆಯುತ್ತಿವೆ. "ಈ ಯೋಜನೆ ಅದ್ಭುತವಾಗಿದೆ, ಆದರೆ ಕರ್ನಾಟಕದ ನಾಗರಿಕರು ಇದರ ಹಲವಾರು ಅನುಕೂಲಗಳನ್ನು ಅರ್ಥಮಾಡಿಕೊಂಡಿಲ್ಲ. ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಸರ್ಕಾರಿ ಸಂಸ್ಥೆಗಳು ಸಾರ್ವಜನಿಕರಿಗೆ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪುವಲ್ಲಿ ಸಮರ್ಥವಾಗಿವೆ ಮತ್ತು ಯೋಜನೆಯನ್ನು ಅಳವಡಿಸಿಕೊಳ್ಳುವಲ್ಲಿ ಅವರು ಬಹಳ ಮುಂದಿದ್ದಾರೆ ಎಂದು ಶಂಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com